ಕರಡು ಅಧಿಸೂಚನೆ ರದ್ದತಿಗೆ ಒತ್ತಾಯ | oppose to kasturirangan report
ಶಿಕಾರಿಪುರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ರೈತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಡಿ.ಎಸ್.ಈಶ್ವರಪ್ಪ, ಈರಣ್ಣ ಪ್ಯಾಟಿ, ಬಸವರಾಜಪ್ಪ, ಬಸವರಾಜ ಪಾಟೀಲ್, ಮಂಜುನಾಥ್ ಇತರರಿದ್ದರು.
ಶಿಕಾರಿಪುರ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಶಿಕಾರಿಪುರ ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಕುಟ್ರಳ್ಳಿ ಗ್ರಾಮದಿಂದ ಶಿಕಾರಿಪುರದ ತಾಲೂಕು ಕಚೇರಿವರೆಗೆ ಬುಧವಾರ ಪಾದಯಾತ್ರೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಜಕ್ಕನಹಳ್ಳಿ, ಅಂಬಾರಗೊಪ್ಪ, ಶೀಲವಂತನಕೊಪ್ಪ, ಕುಮರಿ ಹೊಸೂರು, ಗುಡ್ಡದ ತುಮ್ಮಿನಕಟ್ಟಿ, ಮಡಗ ಹಾರನಹಳ್ಳಿ ಮುಂತಾದ ಗ್ರಾಮಗಳು ಸೂಕ್ಷ್ಮಾತಿಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಲ್ಲ. ಶೇ.100ರಷ್ಟು ಕೃಷಿ ಭೂಮಿ. ಸ್ವತಂತ್ರ ಪೂರ್ವ ಹಾಗೂ ನಂತರದಿಂದ ಬಗರ್‌ಹುಕುಂ, ದರಖಾಸ್ತು, ಇನಾಂ ಮತ್ತು ಅರಣ್ಯ ಹಕ್ಕು ಕಾಯ್ದೆಗಳಡಿ ಸಾಗುವಳಿ ಮಂಜೂರಾತಿ ಪಡೆದು ಉಳುಮೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಡಿ.ಎಸ್.ಈಶ್ವರಪ್ಪ ಮನವರಿಕೆ ಮಾಡಿಕೊಟ್ಟರು.
ಈ ಭಾಗದಲ್ಲಿ ವಾಸಿಸುವ ಸಾವಿರಾರು ಜನರಿಗೆ ಆಧುನಿಕ ರಸ್ತೆ, ನೀರಾವರಿ, ಸರ್ಕಾರಿ ಶಾಲಾ ಕಾಲೇಜು, ಕೃಷಿ ಪತ್ತಿನ ಸಹಕಾರ ಸಂಘಗಳು, ಸಾಲ ಸೌಲಭ್ಯ ಹಾಗೂ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಂತಹ ಸೌಲಭ್ಯಗಳಿವೆ. ಈ ಕೃಷಿ ಭೂಮಿಯಲ್ಲಿ ಯಾವುದೇ ರೀತಿಯ ವನ್ಯಜೀವಿಗಳ ಆವಾಸ ಸ್ಥಾನಗವಾಗಲಿ ಅಥವಾ ಪರಿಸರ ಸೂಕ್ಷ್ಮ ಸನ್ನಿವೇಶಗಳಾಗಲಿ ಇಲ್ಲ ಎಂದು ತಿಳಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಅಭಿವೃದ್ಧಿ ಹೊಂದಿರುವ ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದರಿಂದ ರೈತರು ಸ್ವಂತ ಭೂಮಿ ಮೇಲಿನ ಹಕ್ಕುಗಳನ್ನು ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ. ಈ ಹಿಂದೆಯೂ ಗ್ರಾಮಸಭೆಗಳಲ್ಲಿ ಈ ವರದಿಯನ್ನು ವಿರೋಧಿಸಲಾಗಿತ್ತು. ಒಂದು ವೇಳೆ ಕೇಂದ್ರ ಸರ್ಕಾರ ಈ ಆಕ್ಷೇಪಣೆಯನ್ನು ಪುರಸ್ಕರಿಸಿ, ಕಸ್ತೂರಿರಂಗನ್ ವರದಿಯ ಅಧಿಸೂಚನೆಯನ್ನು ಕೂಡಲೇ ರದ್ದುಪಡಿಸದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಜಗದೀಶ್, ರೋಟಿ ಬಸವರಾಜಪ್ಪ, ಬಸವರಾಜ ಪಾಟೀಲ್, ಮಂಜುನಾಥ್, ಮಲ್ಲನಗೌಡ, ಮಂಜುನಾಯ್ಕ, ಸುಭಾಶ್‌ಚಂದ್ರ, ಎಚ್.ಎಸ್.ಮಂಜು, ರವಿ ನಾಯ್ಕ, ಗವಿಯಪ್ಪ, ಭಾಗ್ಯರಾಜ, ಮೋಹನ್ ರಾವ್, ಕೃಷ್ಣಪ್ಪ, ಮಲ್ಲಿಕಾರ್ಜುನ ಇತರರಿದ್ದರು.