ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗಕ್ಕೂ ಶೇ.90ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿವೆ. ಪುಸ್ತಕಗಳು ಬಂದಂತೆ ಬಿಇಒ(BEO)ಗಳ ಮೂಲಕ ಆಯಾ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬಾಕಿ ಪುಸ್ತಕಗಳು ಕೂಡ ವಾರಾಂತ್ಯದಲ್ಲಿ ಪೂರೈಕೆ ಆಗಲಿವೆ. ಪ್ರಸ್ತುತ ಶಾಲಾ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ(Bisiyuta), ಕ್ಷೀರಭಾಗ್ಯ ಸೇರಿ ಇತರೆ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ಗ್ರಾಮಸ್ಥರೇ ಮಕ್ಕಳನ್ನು ಸ್ವಾಗತಿಸುವರು. ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕಾರ, ಸಿಹಿಯೂಟ, ಹಬ್ಬದ ವಾತಾವರಣ ಸೃಷ್ಟಿಸಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.