ರೈತರಿಗೆ ಡೀಮ್ಡ್ ಫಾರೆಸ್ಟ್ ಆತಂಕ | BJP Protest

ಡೀಮ್ಡ್ ಫಾರೆಸ್ಟ್ ಸರ್ವೇ ಹಿನ್ನೆಲೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಶಿಕಾರಿಪುರದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಮುಖರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಸಿದ್ಲಿಂಗಪ್ಪ, ಯೋಗೀಶ್, ಹುಲ್ಮಾರ್ ಮಹೇಶ್, ಗಾಯತ್ರಿ, ರೇಖಾ ಇತರರಿದ್ದರು.
ಡೀಮ್ಡ್ ಫಾರೆಸ್ಟ್ ಸರ್ವೇ ಹಿನ್ನೆಲೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಶಿಕಾರಿಪುರದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಮುಖರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಸಿದ್ಲಿಂಗಪ್ಪ, ಯೋಗೀಶ್, ಹುಲ್ಮಾರ್ ಮಹೇಶ್, ಗಾಯತ್ರಿ, ರೇಖಾ ಇತರರಿದ್ದರು.
Published on
ಶಿಕಾರಿಪುರ: ರಾಜ್ಯ ಸರ್ಕಾರ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಪರಿಗಣಿಸಲು ಮುಂದಾಗಿದೆ. ಈ ಸಂಬಂಧ ಉಳುಮೆ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡಿರುವುದು ಅಕ್ಷಮ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು, ಪ್ರಮುಖರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಪ್ಪಟ ರೈತ ವಿರೋಧಿ. ಡೀಮ್ಡ್ ಾರೆಸ್ಟ್ ಸರ್ವೇ ಸಂಬಂಧ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ರೈತರಿಗೆ ನೋಟಿಸ್ ನೀಡಲಾಗಿದೆ. ಇದು ರೈತರ ಮೇಲೆ ಕಾಂಗ್ರೆಸ್‌ಗೆ ಇರುವ ಕಾಳಜಿ ಎಂಥದ್ದು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ರೈತರು ದೇಶದ ಬೆನ್ನೆಲುಬು ಎನ್ನುವ ರಾಜ್ಯ ಸರ್ಕಾರ ಆ ಬೆನ್ನೆಲುಬನ್ನೇ ಪುಡಿ ಮಾಡುತ್ತಿದೆ ಎಂದು ರಾಘವೇಂದ್ರ ದೂರಿದರು.
ಬಿಜೆಪಿಯಿಂದ ಯಡಿಯೂರಪ್ಪ ಒಬ್ಬರೇ ಶಾಸಕರಾಗಿದ್ದ ಸಂದರ್ಭ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಆಗಿನ ಅರಣ್ಯ ಸಚಿವ ರಾಚಯ್ಯ ಅವರು ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಕರಾಳ ಶಾಸನ ತರಲು ಮುಂದಾಗಿದ್ದರು. ಆಗ ಯಡಿಯೂರಪ್ಪ ಕಣ್ಣೀರಿಟ್ಟು ರೈತರಿಗಾಗುವ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಶಾಸನ ಜಾರಿಗೆ ಬಾರದಂತೆ ತಡೆದಿದ್ದರು. ಇದು ನಿಜವಾದ ರೈತಪರವಾದ ಹೋರಾಟ ಎಂದರು. ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತಾರಕಕ್ಕೇರಿದೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಸರ್ಕಾರ ಬಂದಾಗಿನಿಂದಲೂ ಅಭಿವೃದ್ಧಿಯನ್ನು ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಕುರ್ಚಿ ಜಗಳ ದೆಹಲಿಗೆ ಶ್‌ಟಿ ಆಗಿದೆ. ಇದು ಮುಗಿಯುವವರೆಗೂ ಅಭಿವೃದ್ಧಿ ಶೂನ್ಯ. ಸಿಎಂ ಮತ್ತು ಡಿಸಿಎಂ ಅಧಿಕಾರಕ್ಕಾಗಿ ಬಲಾಬಲವನ್ನು ಜಾಸ್ತಿಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರೇ ತಾವು ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ರಿ, ಎಷ್ಟು ಬಾರಿ ಬಜೆಟ್ ಮಂಡಿಸಿದ್ದೀರಿ ಎಂಬುದು ಮುಖ್ಯವಲ್ಲ. ನೀವು ರೈತರ ಪರವಾಗಿ ಏನು  ಕೆಲಸ ಮಾಡಿದ್ದೀರಿ ಎಂಬುದು ಮುಖ್ಯ. ರೈತರ ಪಾಲಿಗೆ  ನಿಮ್ಮ ಸರ್ಕಾರ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವಧಿಯಲ್ಲಿ ಹೈನುಗಾರಿಕೆಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿದಿರಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಪಾಲು ಕೊಡುತ್ತಿಲ್ಲ. ರೈತ ವಿದ್ಯಾನಿಧಿ ಯೋಜನೆಯೂ ನಿಂತಿತು. ಮಳೆ ಮಾಪನ ಕೇಂದ್ರಗಳು ಹಾಳಾಗಿ ಹಲವು ವರ್ಷಗಳಾಗಿವೆ. ಸರ್ಕಾರ ಮಾಡಲು ಆಗದಿದ್ದರೆ ಸಿಎಂ ಅವರು ತಕ್ಷಣ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಕೊರತೆಯಿದೆ. ಜಿಲ್ಲೆಯಲ್ಲಿ ಮಳೆಯಿಂದ 10 ಲಕ್ಷಕ್ಕೂ ಅಧಿಕ ಅಡಿಕೆ ಮರಗಳು ನಾಶವಾಗಿವೆ. ರೈತರಿಗೆ ಪರಿಹಾರ ನೀಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಕೇವಲ ಅಧಿಕಾರ ಒಂದೇ ನಿಮ್ಮ ಅಜೆಂಡಾ ಆಗಿದೆ. ರೈತರ ಸಮಸ್ಯೆಗಳ ಬಗ್ಗೆ ಕಣ್ತೆರೆದು ನೋಡಿ ಎಂದು ಒತ್ತಾಯಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಲಿಂಗಪ್ಪ, ತಾಲೂಕು ಅಧ್ಯಕ್ಷ ಯೋಗೀಶ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹುಲ್ಮಾರ್ ಮಹೇಶ್, ಪ್ರಮುಖರಾದ ಚನ್ನವೀರಪ್ಪ, ಸಣ್ಣಹನುಮಂತಪ್ಪ, ಜಗದೀಶ್, ಗುರುರಾಜ್, ಗಾಯತ್ರಿ, ಕವಲಿ ಸುಬ್ರಹ್ಮಣ್ಯ, ಬೆಣ್ಣೆ ಪ್ರವೀಣ, ನಿವೇದಿತಾ ರಾಜು, ರೇಖಾ ರಾಜಶೇಖರ್, ಚಂದ್ರಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net