ಸಾಗರ: ರಾಮಾಯಣದಲ್ಲಿ ಶ್ರೀರಾಮಚಂದ್ರ ದೇವರ ವಿಚಾರಗಳು ಮುಖ್ಯ ಆಗುವಷ್ಟೇ ಪ್ರಾಮುಖ್ಯತೆ ಹನುಮಂತನಿಗೂ ನೀಡಲಾಗುತ್ತದೆ. ಹನುಮಂತ ಭಕ್ತಿ ಮತ್ತು ಸೇವೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ ಎಂದು ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಹೇಳಿದರು.
ಸಾಗರದ ಮಧ್ವ ಸಂಘದಿಂದ ಚೈತ್ರ ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸರು ಕೀರ್ತನೆಗಳಲ್ಲಿ ಹನುಮಂತನ ಲೀಲೆ ಕೊಂಡಾಡಿದ್ದಾರೆ. ರಾಮಾಂಜನೇಯರ ಸಂಬಂಧ ಸರ್ವಕಾಲಕ್ಕೂ ಮಾರ್ಗಸೂಚಿಯಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ರಾಮಾಯಣ ಹಾಗೂ ನಾರಾಯಣ ಪಂಡಿತ ಆಚಾರ್ಯರು ರಚಿಸಿದ ಮಧ್ವವಿಜಯದಲ್ಲಿ ಆಂಜನೇಯನ ಕುರಿತ ಉಲ್ಲೇಖಗಳನ್ನು ಪ್ರಸ್ತಾಪಿಸಿದರು. ಹನುಮ ಜಯಂತಿ ಸೇವೆ ನಡೆಸಿಕೊಟ್ಟ ಚೂಡಾಮಣಿ ರಾಮಚಂದ್ರ ಅವರನ್ನು ಗೌರವಿಸಲಾಯಿತು.
ಮಧ್ವ ಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ವೈ.ಮೋಹನ್, ಶ್ರೀಶಾಚಾರ್, ಪಿ.ಜಿ.ಸಹನಾ, ನಾಗಭೂಷಣ, ದೀಪಕ್ ಸಾಗರ್, ವಾದಿರಾಜ್, ಭಾಗ್ಯಲಕ್ಷ್ಮೀ ಶಾಂತಮೂರ್ತಿ, ರೇವತಿ ಹತ್ವರ್, ಮಂಜುಳಾ, ವಾಸುಕಿ, ವೈದೇಹಿ ಇತರರಿದ್ದರು.