ಮನುಷ್ಯನಿಂದ ಪರಿಸರ ವ್ಯವಸ್ಥೆಗೆ ಧಕ್ಕೆ | Lecture on wildlife
ಹೆಗ್ಗೋಡಿನಲ್ಲಿ ಆಯೋಜಿಸಿದ್ದ ಕೆ.ವಿ.ಸುಬ್ಬಣ್ಣ ಸಂಸ್ಮರಣೆ ಕಾರ್ಯಕ್ರಮವನ್ನು ಹೆಸರಾಂತ ವನ್ಯಜೀವಿ ತಜ್ಞರಾದ ಕೃಪಾಕರ್ ಮತ್ತು ಸೇನಾನಿ ಉದ್ಘಾಟಿಸಿದರು. ವಿಮರ್ಶಕ ಟಿ.ಪಿ.ಅಶೋಕ್ ಇದ್ದರು.
ಸಾಗರ: ಜೀವ ಪರಿಸರದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಮನುಷ್ಯ ಪರಿಸರವನ್ನೇ ತಿರುಚಿ ಬದುಕುತ್ತಿದ್ದಾನೆ. ಉಳಿದ ಜೀವಿಗಳು ಬದಲಾದ ಪರಿಸರದಲ್ಲಿ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿವೆ ಎಂದು ವನ್ಯಜೀವಿ ತಜ್ಞ ಸೇನಾನಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹೆಗ್ಗೋಡಿನ ನೀನಾಸಂ ಆವರಣದಲ್ಲಿ ಗುರುವಾರ ರಂಗಕರ್ಮಿ ಕೆ.ವಿ.ಸುಬ್ಬಣ್ಣ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ‘ಕಾಡು-ನಾಡಿನ ಸಂಘರ್ಷ’ ಕುರಿತು ಉಪನ್ಯಾಸ ನೀಡಿದ ಅವರು, ಶೇ.95ರಷ್ಟು ಪರಿಸರ ಬದಲಾವಣೆ ಮನುಷ್ಯನಿಂದಲೇ ನಡೆಯುತ್ತಿದೆ ಎಂದರು.
ನಾನು ಮತ್ತು ಕೃಪಾಕರ್ ಬಹಳ ವರ್ಷಗಳ ಕಾಲ ದಲಿತ ಸಂಘಟನೆ ಮತ್ತು ರೈತ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರಿಂದ ಕಾಡು-ನಾಡಿನ ಸಂಘರ್ಷ ಮತ್ತು ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತ ಬಂದಿದ್ದೇನೆ ಎಂದರು.
ಗುಬ್ಬಚ್ಚಿಗಳು ಮಾಯವಾಗುತ್ತಿವೆ. ಕಾಗೆಗಳು ಕಾಣಿಸುತ್ತಿಲ್ಲ. ಮಲೆನಾಡಿನಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಕಾಡು ಪ್ರಾಣಿಗಳು ನಗರದೊಳಗೆ ನುಗ್ಗುತ್ತವೆ ಎನ್ನುವ ಅನೇಕ ಸಂಗತಿಗಳನ್ನು ಇಂದು ಚರ್ಚೆಯಲ್ಲಿ ತೆರೆದಿಟ್ಟಿದ್ದೀರಿ. ಇದಕ್ಕೆ ಹತ್ತು ಹಲವು ಮುಖಗಳಿವೆ. ಮಲೆನಾಡಿನಲ್ಲಿ ಮನೆಕಟ್ಟುವ ಚಿಂತನೆಗಳು ಬದಲಾದವು. ಹೆಂಚಿನ ಮನೆಯ ಬೊಂಬುಗಳಿಗೆ ತೂಗುಬೀಳುತ್ತಿದ್ದ ಗುಬ್ಬಚ್ಚಿ ಗೂಡುಗಳಿಗೆ ಅವಕಾಶವಾಗದೆ ತಾರಸಿ ಮನೆಗಳು ತೆರೆದುಕೊಂಡವು. ಮನೆಯ ಹಿಂಭಾಗದಲ್ಲಿ ಪಾತ್ರೆ, ಬಟ್ಟೆ ತೊಳೆಯುವ ಸಂಪ್ರದಾಯ ದೂರವಾಗಿ ಎಲ್ಲವೂ ಮನೆಯ ಗೋಡೆಯೊಳಗೆ ನಡೆಯಲು ಆರಂಭವಾಯಿತು ಎಂದರು.
ಸುಲಭವಾಗಿ ಸಿಗುತ್ತಿದ್ದ ಆಹಾರ ಗುಬ್ಬಚ್ಚಿಗಳಿಗೆ ಮಾಯವಾಗಿ ಅವುಗಳು ಬೇರೆದಾರಿ ಹಿಡಿದವು. ಮನುಷ್ಯ ಭೂಮಿಗೆ ಬಂದು ಸುಮಾರು 3 ಲಕ್ಷ ವರ್ಷಗಳಾದವು. ಮನುಷ್ಯ ಅಸ್ತಿತ್ವಕ್ಕೆ ಬರುವುದರೊಳಗೇ ಆತನಿಗೊಂದು ಸಿದ್ಧ ವೇದಿಕೆ ನಿರ್ಮಾಣವಾಗಿತ್ತು. ಆತ ತಿರುಚಿದ ಬದಲಾವಣೆಗಳಿಂದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾನೆ ಎಂದು ಹೇಳಿದರು.
ಕಾಡುಗಳನ್ನು ನಾವು ಸೃಷ್ಟಿ ಮಾಡುತ್ತೇವೆ ಎಂಬುದು ಬರೀ ಘೋಷಣೆಯಷ್ಟೆ. ಫೋಟೋ ಪೋಸ್‌ಗಾಗಿ ವನಮಹೋತ್ಸವ ಮಾಡುತ್ತೇವೆ. ನಿತ್ಯಹರಿದ್ವರ್ಣದ ಕಾಡುಗಳು ಸೃಷ್ಟಿಯಾಗಲು ನೂರಾರು ವರ್ಷಗಳೇ ಬೇಕಾಗುತ್ತದೆ. ಪರಿಸರವನ್ನು ವೈಜ್ಞಾನಿಕವಾಗಿ ನೋಡುವ ಚಿಂತನೆಯೂ ಮುಖ್ಯ. ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಪರಿಸರದ ಮೇಲೆ ಒತ್ತಡ ಹೇರುತ್ತಲೇ ಇದ್ದೇವೆ. ಜೀವನದ ಪದ್ಧತಿ ಬದಲಾಗುತ್ತಲೇ ಇದೆ. ಕಪ್ಪೆಯ ಕೂಗು, ಹಕ್ಕಿಯ ಕೂಗು ಗೊತ್ತೇ ಇಲ್ಲದವರಿಗೆ ಪರಿಸರದ ಸಂಗತಿ ಹೇಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಒಂದು ಕಾಲದಲ್ಲಿ ನೆಲ, ಜಲ, ಬದುಕು ಜಡೆಯಂತೆ ಹೆಣೆದಿತ್ತು. ಈಗ ಅವೆಲ್ಲವನ್ನೂ ಬೇರ್ಪಡಿಸಿ ಬದುಕುತ್ತಿದ್ದೇವೆ. ಅದರಲ್ಲಿ ನೀರಿನ ಮೇಲೆ ನಡೆಯುತ್ತಿರುವ ಪ್ರಯೋಗ ಮತ್ತು ಪ್ರಹಾರ ಅತ್ಯಂತ ಅಪಾಯಕಾರಿ ಎಂದು ಸೇನಾನಿ ಆತಂಕ ವ್ಯಕ್ತಪಡಿಸಿದರು. ಮಲೆನಾಡು, ಬಯಲುನಾಡು ಎಂಬುದನ್ನು ಯೋಚಿಸದೆ, ಮಣ್ಣಿನ ಗುಣವನ್ನು ಚಿಂತಿಸದೆ ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತ ಲಾಭದ ದೃಷ್ಟಿಕೋನದಲ್ಲಿಯೇ ಮುನ್ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ. ಇದಕ್ಕೆ ದಾಳಿಂಬೆ ಮತ್ತು ಅಡಿಕೆ ಬೆಳೆಗಳೇ ಉದಾಹರಣೆ. ಒಂದು ಸಲ ರೋಗ ತಗುಲಿದರೆ ಸಂಪೂರ್ಣ ವ್ಯವಸ್ಥೆಯೇ ನಾಶವಾಗಿಬಿಡುತ್ತದೆ ಎಂದರು. ಪರಿಸರದಲ್ಲಿ ಒಂದಕ್ಕೊಂದು ಜೀವಿಗಳು ಅವಲಂಬಿತವಾಗಿ ಬದುಕುತ್ತಿರುತ್ತವೆ. ಸ್ವಲ್ಪ ಬದಲಾವಣೆಯಾದರೂ ಜೀವಿಗಳ ಜೀವನಕ್ರಮದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂದರು.
ಸಾವಯ ಕೃಷಿ ಬರೀ ಮಾತಿಗೆ ಸೀಮಿತ
ಸಾವಯವ ಕೃಷಿ, ಸುಸ್ಥಿರ ಬದುಕು ಎನ್ನುವ ವಾಕ್ಯಗಳು ಇಂದು ಬರೀ ಮಾತಿಗೆ ಸೀಮಿತವಾಗಿದೆ. ಎಲ್ಲೋ ಕೆಲವರು ಈ ಕುರಿತಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವನ್ಯಜೀವಿ ತಜ್ಞ ಕೃಪಾಕರ ಅಭಿಪ್ರಾಯಪಟ್ಟರು. ದೊಡ್ಡ ನಗರಗಳಲ್ಲಿ ಸಾವಯವ ತರಕಾರಿಗಳೆಂದು ಹೇಳಿ ಕವರ್‌ಗಳಲ್ಲಿ ತೂರಿಸಿ ಹೆಚ್ಚಿನ ಹಣಕ್ಕೆ ಮಾರುತ್ತಿದ್ದಾರೆ. ಅವುಗಳನ್ನು ಲ್ಯಾಬ್‌ಗಳಿಗೆ ಒಯ್ದು ಯಾರಾದರೂ ತಪಾಸಣೆ ಮಾಡಿಸಿದ್ದಾರೆಯೇ? ಒಟ್ಟು ಅದೊಂದು ಫ್ಯಾಷನ್ ಆಗುತ್ತಿದೆ ಎಂದರು. ಕಾಡುಪ್ರಾಣಿಗಳು ಒತ್ತಡದಲ್ಲಿ ಬದುಕುತ್ತವೆ. ಮನುಷ್ಯನ ವೇಗದ ಬೆಳವಣಿಗೆಯಿಂದಾಗಿ ಪ್ರಾಣಿಗಳ ಜಾಗವನ್ನೂ ಮನುಷ್ಯನೇ ಕಬಳಿಸುತ್ತಿದ್ದಾನೆ. ಅವುಗಳಿಗೆ ನೆಲೆ ಇಲ್ಲದಂತಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಹೊಸ ಆಲೋಚನೆಗಳು ಅಪಾಯ ತಂದೊಡ್ಡುತ್ತಿವೆ. ನಾವು ಒಂದು ಸಂಘಟನೆಯನ್ನು ಕಟ್ಟಿಕೊಂಡು ಬಂಡೀಪುರ ಸುತ್ತಮುತ್ತಲಿನ 243 ಹಳ್ಳಿಗಳಲ್ಲಿ ಸೌದೆಗೆ ಪರ್ಯಾಯವಾಗಿ ಕಡಿಮೆ ವೆಚ್ಚದಲ್ಲಿ ಗ್ಯಾಸ್ ವ್ಯವಸ್ಥೆಯನ್ನು ಜನರಿಗೆ ನೀಡಿದ್ದೇವೆ. ಇಲ್ಲಿ ವಾಸಿಸುವ ಬಹುತೇಕರು ಬಡ ಕುಟುಂಬದವರು. ಅವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ತೆಗೆದುಕೊಳ್ಳುತ್ತಿದೆ. ಅದರಲ್ಲಿ ಶೇ.95ರಷ್ಟು ಹೆಣ್ಣು ಮಕ್ಕಳಿಗೆ ಆದ್ಯತೆ ನೀಡುತ್ತ ಬಂದಿದ್ದೇವೆ ಎಂದರು. ಕೃಪಾಕರ್ ಮತ್ತು ಸೇನಾನಿ ಅವರು ಕಾಡು, ವನ್ಯಜೀವಿಗಳು, ಪರಿಸರ ಅಧ್ಯಯನ, ಮಲೆನಾಡಿನ ಪರಿಸರ ಸಂಬಂಧಿ ಸಮಸ್ಯೆಗಳು, ಕಾಡುನಾಶ ಮುಂತಾದ ವಿಚಾರಗಳ ಕುರಿತು ಸಂವಾದ ನಡೆಸಿದರು.