ಹೊಸನಗರದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ

ಹೊಸನಗರ ತಾಲೂಕಿನ ಮೂಡುಗೊಪ್ಪದಲ್ಲಿ ಫಸಲುಭರಿತ ಅಡಿಕೆ ಮರ ಬಿದ್ದಿರುವುದು.
ಹೊಸನಗರ ತಾಲೂಕಿನ ಮೂಡುಗೊಪ್ಪದಲ್ಲಿ ಫಸಲುಭರಿತ ಅಡಿಕೆ ಮರ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಒಂದು ವಾರದಲ್ಲಿ 300ಕ್ಕೂ ಹೆಚ್ಚು ಧರಾಶಾಯಿ
  • ಹಲವು ಗ್ರಾಮಗಳಲ್ಲಿ ಆವರಿಸಿದ ಕತ್ತಲು
  • ತೋಟಗಾರಿಕೆ ಬೆಳೆಗಳು ವ್ಯಾಪಕ ನಷ್ಟ
ಹೊಸನಗರ: ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಗಾಳಿ ಮಳೆ ಅಬ್ಬರಕ್ಕೆ ಹಲವೆಡೆ ಮರಗಳು ಉರುಳಿದ್ದು, ಸಂಚಾರದಲ್ಲಿ ವ್ಯತ್ಯಯವಾಗಿದೆ. ಅಲ್ಲದೆ ಅನೇಕ ಮನೆಗಳಿಗೂ ಹಾನಿ ಉಂಟಾಗಿದೆ.
ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿದ ಪರಿಣಾಮ ಬ್ಯಾಕೋಡು, ಕೋಡೂರು, ನಗರ ಮಾಸ್ತಿಕಟ್ಟೆ ಭಾಗದ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಒಂದು ವಾರದಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ನಿರಂತರ ವಿದ್ಯುತ್ ಕೊರತೆಯಿಂದ ಯುಪಿಎಸ್ ಕೂಡ ಚಾರ್ಜ್ ಇಲ್ಲದೆ ಕತ್ತಲು ಆವರಿಸಿದೆ. ಮೊಬೈಲ್, ಬ್ಯಾಟರಿ ಕೂಡ ಪ್ರಯೋಜನಕ್ಕೆ ಬಾರದಾಗಿದೆ. ಮಳೆ ಅನಾಹುತದ ಬಗ್ಗೆ ಮಾಹಿತಿ ನೀಡಲು ಕೂಡ ಸಾಧ್ಯವಾಗದೆ ಜನರು ಪರದಾಡುವಂತಾಗಿದೆ.
ಜೂನ್‌ನಲ್ಲಿ ಮಳೆ ಇಲ್ಲದೆ ರೈತರು ಕಂಗೆಟ್ಟಿದ್ದರು. ಜುಲೈ ಆರಂಭದ ಗಾಳಿ ಮಳೆ ಅಬ್ಬರಕ್ಕೆ ಸಾವಿರಾರು ಫಲಭರಿತ ಅಡಿಕೆ ಮರಗಳು ಉರುಳಿವೆ. ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಮೂಡುಗೊಪ್ಪ ಚಕ್ಕಾರು ಗ್ರಾಮದ ವಿನಾಯಕ ಎಂಬುವರ 30ಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿವೆ. ಕಾಳುಮೆಣಸಿನ ಬಳ್ಳಿಗಳು ನಾಶವಾಗಿವೆ.
ವಾರಾಹಿ, ಕುಮದ್ವತಿ, ಶರಾವತಿ, ಮಾವಿನಹೊಳೆ ನದಿಗಳು ಸೇರಿ, ಹೊಳೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಹುಲಿಕಲ್‌ನಲ್ಲಿ 227 ಮಿ.ಮೀ, ಮಾಣಿಯಲ್ಲಿ 211 ಮಿ.ಮೀ, ಯಡೂರು ಭಾಗದಲ್ಲಿ 200 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 195 ಮಿ.ಮೀ, ಚಕ್ರಾದಲ್ಲಿ 152 ಮಿ.ಮೀ, ಸಾವೇಹಕ್ಲು ಜಲಾಶಯ ಪ್ರದೇಶದಲ್ಲಿ 148 ಮಿ.ಮೀ ಮಳೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net