ಹೊಸನಗರ ರಾಮಚಂದ್ರಾಪುರ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ದೇವರಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಷೇಕ ಪೂಜೆ ನೆರವೇರಿಸಿದರು.
Published on:
Copied
Follow Us
ಹೊಸನಗರ: ಮಹಾನಂದಿ ಗೋಲೋಕದ ಕೃಷ್ಣಾರ್ಪಣಂ ಅಂಗವಾಗಿ ಆಯೋಜಿಸಿದ್ದ ಗೋ ಮಹೋತ್ಸವದಲ್ಲಿ ಗೋದತ್ತು ಸ್ವೀಕಾರ ಮಾಡಿದವರೊಂದಿಗೆ ಸಂವಾದ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನನ್ನ ಮನೆ ನನ್ನ ವಾಹನ, ನನ್ನ ತೋಟ ಹೀಗೆ ಪ್ರತಿಯೊಂದಕ್ಕೂ ನನ್ನ ಎಂಬ ವಸ್ತುವಿಗೆ ಹಾತೊರೆಯುವ ನಮಗೆ ನನ್ನ ಗೋವು ಎನ್ನುವುದು ಕೂಡಾ ಅಗತ್ಯ. ಕೃಷಿ ಸಂಸ್ಕೃತಿ ವ್ಯವಸ್ಥಿತವಾಗಿ ನಡೆಯುವಂತಾದರೆ ಗೋಸಂರಕ್ಷಣೆಯೂ ಆಗುತ್ತದೆ. ಇಂದು ಕೃಷಿಗೆ ಗೋವಿನ ಅವಲಂಬನೆ ಅನಿವಾರ್ಯ ಎಂಬ ಅರಿವು ಎಲ್ಲರಿಗೂ ಆಗತೊಡಗಿದೆ. ಇದು ವ್ಯಾಪಕವಾಗಬೇಕು ಮತ್ತು ಅಂತಹ ಕೃಷಿಯನ್ನು ನಾವು ಅವಲಂಬಿಸಬೇಕು. ಇದರಿಂದ ಗೋಸಂರಕ್ಷಣೆ ಪ್ರತಿ ಮನೆಯಲ್ಲೂ ಸಾಧ್ಯ ಎಂದರು.
ಶ್ರೀಪೂಜೆ, ಪಾದುಕ, ಸೋಪಾನ ಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿ ಧಾರ್ಮಿಕ ವಿಧಿಗಳು, ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು.
ವಿಷ್ಣು ಸಹಸ್ರನಾಮದ ಕುರಿತು ಉಪನ್ಯಾಸ ನೀಡಿದ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ವಿಷ್ಣು ಸಹಸ್ರನಾಮ ಎಂಬುದು ಮನುಷ್ಯನ ಆರೋಗ್ಯಕ್ಕಿರುವ ಔಷಧವೂ ಹೌದು. ಅದರ ಪಠಣದಿಂದ ನೆಮ್ಮದಿ ಕಾಣಲು ಸಾಧ್ಯ ಎಂದರು. ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮಾತನಾಡಿ, ಮಹಾನಂದಿ ಎಂಬ ಗೋವಿನ ಕಾರಣ ಇಲ್ಲಿನ ಗೋಲೋಕ ವಿಶ್ವದಲ್ಲಿ ಮಾನ್ಯತೆ ಪಡೆಯುವಷ್ಟು ಬೆಳೆದು ನಿಂತಿತು ಎಂದರು.
ಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ, ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಡಾ. ಸೀತಾರಾಮ್ ಪ್ರಸಾದ್, ಡಾ. ಎಸ್.ಆರ್. ಹೆಗಡೆ, ಕೃಷ್ಣಪ್ರಸಾದ್ ಎಡಪಾಡಿ ಇತರರಿದ್ದರು.