ತಾಲೂಕಿನ ಬರಗಿ ಗ್ರಾಮದಲ್ಲಿ ಧರ್ಮಸ್ಥಳ ಯೋಜನೆಯಿಂದ ನಿರ್ಮಿಸಿಕೊಟ್ಟ ವಾತ್ಸಲ್ಯ ಮನೆಯನ್ನು ಕನ್ನಮ್ಮ ಎಂಬುವರಿಗೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಹಸ್ತಾಂತರಿಸಿದರು. ಎಂ.ಬಿ.ಪುಟ್ಟಪ್ಪ, ಕೆ.ಭಾಸ್ಕರ, ಜಯಂತಿ ಇತರರಿದ್ದರು.
ಸೊರಬ: ಪ್ರಸ್ತುತ ದಿನಗಳಲ್ಲಿ ಯುವಕರು ಪಾರಂಪರಿಕವಾಗಿ ಬೆಳೆದು ಬಂದ ನಮ್ಮ ಮೂಲ ಸಂಸ್ಕೃತಿ, ಕೌಟುಂಬಿಕ ಸಾಮರಸ್ಯ ಮತ್ತು ಕುಟುಂಬದ ಬಾಂಧವ್ಯ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಹೇಳಿದರು.
ತಾಲೂಕಿನ ಬರಿಗೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಕನ್ನಮ್ಮ ಅವರಿಗೆ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.
ಇಂದು ಅನಾಥಾಶ್ರಮ, ವೃದ್ಧಾಶ್ರಮ ಹೆಚ್ಚಾಗತೊಡಗಿವೆ. ಪ್ರತಿ ಕುಟುಂಬದ ಹಿರಿಯರು ತಮ್ಮ ಮಕ್ಕಳನ್ನು ಸಾಕಿ ಸಲಹಿ ನಮ್ಮ ಬದುಕಿಗೆ ದಾರಿ ತೋರಿದ್ದಾರೆ. ಇವರನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಯೋಜನೆಯ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯ 700ಕ್ಕೂ ಹೆಚ್ಚು ಕುಟುಂಬಗಳು ವಾತ್ಸಲ್ಯ ಯೋಜನೆಯ ನೆರವು ಪಡೆದು ನೆಮ್ಮದಿಯ ಜೀವನ ಮಾಡಿಕೊಂಡಿದ್ದಾರೆ. ಸಂಘದ ಎಲ್ಲ ಯೋಜನೆಗಳ ಪ್ರಯೋಜನ ಪಡೆದು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ಸಹಕಾರ ನೀಡುವಲ್ಲಿ ಮುಂದಾಗಬೇಕು. ಹಿರಿಯರನ್ನು ಗೌರವದಿಂದ ಕಾಣಬೇಕು. ಮಾತೃವಾತ್ಸಲ್ಯದ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ತಾಲೂಕು ಸದಸ್ಯ ದಿನಕರ ಭಾವೆ ಮಾತನಾಡಿ, ವಾತ್ಸಲ್ಯ ಯೋಜನೆ ಅತ್ಯುತ್ತಮ ಕಾರ್ಯಕ್ರಮ. ಬಡ ಕುಟುಂಬದವರು ಇದರ ಪ್ರಯೋಜನ ಪಡೆಯಬೇಕು ಎಂದರು.
ದೂಗೂರು ಗ್ರಾಪಂ ಸದಸ್ಯ ಎಂ.ಬಿ.ಪುಟ್ಟಪ್ಪ, ಮಾಜಿ ಅಧ್ಯಕ್ಷ ಕೆ.ಭಾಸ್ಕರ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಶೇಷಪ್ಪ, ಬಿ.ಎನ್.ಸಿ.ರಾವ್, ಧರ್ಮಸ್ಥಳ ಯೋಜನೆ ತಾಲೂಕು ಅಧಿಕಾರಿ ಜಯಂತಿ, ಒಕ್ಕೂಟದ ಅಧ್ಯಕ್ಷ ಸಾದಿಕ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪ್ರಭಾವತಿ, ಮೇಲ್ವಿಚಾರಕಿ ಶೋಭಾ ಇತರರಿದ್ದರು.