ಕಾಂಗ್ರೆಸ್ ಭವನದ ಹೆಸರಲ್ಲಿ ಕೋಟಿ ಲೂಟಿ! I congress bhavana
ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯ ಸರ್ಕಾರದಿಂದ ಹಗಲು ದರೋಡೆ
ಸಿಎಂ ನಿವೇಶನಗಳನ್ನು ಗುಳುಂ ಮಾಡುತ್ತಿರುವ ಕೈ
ಎಂಎಲ್‌ಸಿ ಅರುಣ್ ಗಂಭೀರ ಆರೋಪ
ಶಿವಮೊಗ್ಗ: ಕಾಂಗ್ರೆಸ್ (congress) ಭವನ ನಿರ್ಮಾಣ ವಿಷಯದಲ್ಲಿ ರಾಜ್ಯ ಸರ್ಕಾರ (government) ಅಧಿಕಾರ ದುರ್ಬಳಕೆ ಮೂಲಕ ಹಗಲು ದರೋಡೆ ಮಾಡುತ್ತಿದೆ. 100 ಕಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅತಿ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು ಪಡೆದುಕೊಂಡು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ (arun) ಗಂಭೀರ ಆರೋಪ ಮಾಡಿದ್ದಾರೆ.
ಮಾರ್ಗಸೂಚಿ ಖಂಡಿಸಿ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಕಟ್ಟಿನ ಜಾಗದಲ್ಲಿರುವ ಸಿಎ ನಿವೇಶನಗಳನ್ನು ಕಾಂಗ್ರೆಸ್ ಭವನಕ್ಕೆ ನೀಡಿ ಆದೇಶ ಮಾಡಲಾಗುತ್ತಿದೆ. ಹೈಕೋರ್ಟ್ ಛೀಮಾರಿ ಹಾಕಿದ್ದರೂ ಸರ್ಕಾರ ತನ್ನ ಹಗಲು ದರೋಡೆಯನ್ನು ಮುಂದುವರಿಸಿದೆ ಎಂದು ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ರಾಜ್ಯದ 23 ಕಡೆಗಳಲ್ಲಿ ಎಸ್‌ಆರ್ ದರದ ಶೇ.5ರಷ್ಟುನ್ನು ಪಾವತಿಸಿ ಶಾಶ್ವತವಾಗಿ ಕಾಂಗ್ರೆಸ್ ಭವನಕ್ಕೆ ಪಡೆಯಲಾಗಿದೆ. ಎಸ್‌ಆರ್ ದರ 1.70 ಕೋಟಿ ರೂ. ಇದ್ದರೆ ಅದನ್ನು 8.50 ಲಕ್ಷ ರೂ.ಗೆ ಕಾಂಗ್ರೆಸ್ ಮಡಿಲಿಗೆ ಹಾಕಲಾಗುತ್ತಿದೆ. ಸುಮಾರು ಒಂದು ಸಾವಿರ ಕೋಟಿ ರೂ. ಮೌಲ್ಯದ ಸಿಎ ನಿವೇಶನಗಳನ್ನು ಸುಮಾರು 100 ಕೋಟಿ ರೂ.ಗೆ ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ ಎಂದು ತಿಳಿಸಿದರು.
ತುಮಕೂರಿನಲ್ಲಿ ನಡೆದಿದ್ದ ಇಂತಹದ್ದೇ ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆಗ ಕೋರ್ಟ್ ಛೀಮಾರಿ ಹಾಕಿತ್ತು ಆದರೂ ಕಾಂಗ್ರೆಸ್ ತನ್ನ ತಪ್ಪುಗಳಿಗೆ ಕಾನೂನಿನ ರಕ್ಷಣೆ ಪಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಈ ಕಳ್ಳಾಟದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್, ಮಾಧ್ಯಮ ಸಹಪ್ರಮುಖ್ ಮಂಜುನಾಥ, ಶ್ರೀನಾಗ್, ಸಾಮಾಜಿಕ ಜಾಲತಾಣದ ಪ್ರಮುಖರಾದ ಶರತ್ ಕಲ್ಯಾಣಿ ಸುದ್ದಿಗೋಷ್ಠಿಯಲ್ಲಿದ್ದರು.
ಶಿಕ್ಷಣ ಇಲಾಖೆಗೆ ದಿಕ್ಕುದೆಸೆಯಿಲ್ಲ!
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ, ಕಂದಾಯ, ಜಲಸಂಪನ್ಮೂಲ ಇಲಾಖೆಗಷ್ಟೇ ಬೇಡಿಕೆ. ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದಂತಾಗಿದೆ. ಹಿಂದೆ ಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪ ಸಾವಿರಾರು ಶಿಕ್ಷಕರ ನೇಮಕಾತಿ ಎಂದು ಮೂಗಿಗೆ ತುಪ್ಪ ಸವರಿದರು. ಯಾವ ನೇಮಕಾತಿಯೂ ಆಗಲಿಲ್ಲ. ಶಾಲೆಗಳ ಅಭಿವೃದ್ಧಿಯೂ ಆಗಲಿಲ್ಲ. ಕೆಪಿಎಸ್ ಶಾಲೆಗಳಿಗೆ ಶಿವಮೊಗ್ಗದಲ್ಲಿ ಶಂಕುಸ್ಥಾಪನೆ ನೆರವೇರಲಿಲ್ಲ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಅನೇಕ ಸಮಸ್ಯೆಗಳಿವೆ ಈ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ ಎಂದು ಡಿ.ಎಸ್.ಅರುಣ್ ದೂರಿದರು.
ಗ್ಯಾರಂಟಿ ಸಮಿತಿ ಏನು ಮಾಡಿತು?
ರಾಜ್ಯ ಸರ್ಕಾರ ಕೆಲ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ. ಅನರ್ಹರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಸರ್ಕಾರ ಪರಿಷ್ಕರಣೆಗೆ ನೀಡಿರುವ ಕಾರಣ. ಕಾಂಗ್ರೆಸ್ ಮುಖಂಡರೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೇತೃತ್ವ ವಹಿಸಿಕೊಂಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಈ ಸಮಿತಿಗಳ ರಚನೆಯಾಗಿದೆ. ಇಷ್ಟು ದಿನ ಈ ಸಮಿತಿ ಏನು ಮಾಡುತ್ತಿತ್ತು? ಅನರ್ಹರು ಪ್ರಯೋಜನ ಪಡೆಯುತ್ತಿರುವುದು ಸಮಿತಿಗೆ ತಿಳಿಯಲಿಲ್ಲವೆ ಎಂದು ಡಿ.ಎಸ್.ಅರುಣ್ ಪ್ರಶ್ನಿಸಿದರು.
ಎಸ್‌ಐಆರ್ ಬಿಜೆಪಿಯದ್ದಲ್ಲ, ಆಯೋಗದ್ದು
ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್‌ನವರು ವೃಥಾ ಸುಳ್ಳು ಸುದ್ದಿ ಹೊರಡಿಸುತ್ತಿದ್ದಾರೆ. ಇದು ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರು ಮಾಡುತ್ತಿರುವ ಕೆಲಸ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಎಸ್‌ಐಆರ್ ಮಾಡುತ್ತಿರುವುದು ಚುನಾವಣಾ ಆಯೋಗವೇ ಹೊರತು ಬಿಜೆಪಿಯಲ್ಲ. 2002 ಹಾಗೂ ಅದಕ್ಕಿಂತಲೂ ಮುಂಚೆ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಎಸ್‌ಐಆರ್ ನಡೆದಿದೆ. ಅಲ್ಪಸಂಖ್ಯಾತರು, ದಲಿತರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಎಸ್‌ಐಆರ್ ನಡೆಸಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅರುಣ್ ಸ್ಪಷ್ಟಪಡಿಸಿದರು.
ಪಕ್ಷಕ್ಕೆ ದ್ರೋಹ ಬಗೆದದ್ದು ಅಕ್ಷಮ್ಯ
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಕೆಲವರು ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ. ಅವರು ತಾಯಿಯಂತಹ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅಡ್ಡ ಮತದಾನ ಮಾಡಿದವರು ಗೆದ್ದಿದ್ದು ಬಿಜೆಪಿ ಚಿಹ್ನೆಯಿಂದಲೇ ಹೊರತು ಅವರ ವೈಯಕ್ತಿಕ ವರ್ಚಸ್ಸಿನಿಂದಲ್ಲ. ಪಕ್ಷದ ರಾಜ್ಯ ನಾಯಕತ್ವವನ್ನು ನಿರ್ಧರಿಸಿದ್ದು ಕೇಂದ್ರ ನಾಯಕರು. ಅದು ಅಡ್ಡ ಮತದಾನ ಮಾಡಿದವರಿಗೆ ಇಷ್ಟವಿಲ್ಲ ಎಂದರೆ ಕೇಂದ್ರ ನಾಯಕರ ಬಳಿ ನೇರವಾಗಿ ಮಾತನಾಡಬಹುದು. ಸರಿ ಬರಲಿಲ್ಲ ಎಂದರೆ ಪಕ್ಷವನ್ನೇ ತೊರೆಯಬಹುದು. ನಮ್ಮ ಕಾರ್ಯಕರ್ತರ ಪಡೆ ಸದೃಢವಾಗಿದೆ. ನಾವು ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತೇವೆ. ಅಡ್ಡ ಮತದಾನದಂತಹ ಕೃತ್ಯ ಎಸಗಿ ಕಾರ್ಯಕರ್ತರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಡಿ.ಎಸ್.ಅರುಣ್ ಕಿಡಿಕಾರಿದರು.