ಬೆಳೆ ನಷ್ಟ ಸರ್ವೇ ಕಾರ್ಯ ಪ್ರಗತಿಯಲ್ಲಿ | Minister visit

ಮಳೆಯಿಂದ ಹಾನಿಗೀಡಾದ ಗುಡುಮಗಟ್ಟೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದರು. ಸಿಇಒ ಹೆಮಂತ್, ಸಿ.ಹನುಮಂತು, ಶಿವಕುಮಾರ್, ಆರ್.ಉಮೇಶ್ ಇತರರಿದ್ದರು.
ಮಳೆಯಿಂದ ಹಾನಿಗೀಡಾದ ಗುಡುಮಗಟ್ಟೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದರು. ಸಿಇಒ ಹೆಮಂತ್, ಸಿ.ಹನುಮಂತು, ಶಿವಕುಮಾರ್, ಆರ್.ಉಮೇಶ್ ಇತರರಿದ್ದರು.
Published on
ಹೊಳೆಹೊನ್ನೂರು: ಮಳೆ ಹಾನಿ ವರದಿಯನ್ನು ಶೀಘ್ರ ದಾಖಲಿಸುವ ಸಲುವಾಗಿ ಅಕ್ಕಪಕ್ಕದ ತಾಲೂಕುಗಳಿಂದ ಕಂದಾಯ ಅಧಿಕಾರಿಗಳನ್ನು ಹೊಳೆಹೊನ್ನೂರು ಭಾಗಕ್ಕೆ ಕರೆಸಿಕೊಂಡು ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಹೊಳೆಹೊನ್ನೂರು ಮತ್ತು ಆನವೇರಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಭಾರಿ ಗಾಳಿ ಸಹಿತ ಮಳೆಯಿಂದ ಹಾನಿಗೀಡಾದ ಅರಹತೊಳಲು, ವಡ್ಡರಹಟ್ಟಿ, ತಡಸ, ಗುಡುಮಗಟ್ಟೆ, ಮಲ್ಲಿಗೆನಹಳ್ಳಿ, ಹನುಮಂತಾಪುರ, ಮೈದೊಳಲು ಗ್ರಾಮಗಳಲ್ಲಿ ತೋಟಗಳನ್ನು ವೀಕ್ಷಿಸಿ ಬೆಳೆಗಾರರೊಂದಿಗೆ ಸಭೆ ನಡೆಸಿದರು.
ಬೆಳೆಗಾರರು ನಷ್ಟ ಸರಿದೂಗಿಸಿಕೊಳ್ಳಲು ಕನಿಷ್ಠ 10 ವರ್ಷ ಬೇಕಾಗಬಹುದು. ಯಾವ ಕಾರಣಕ್ಕೂ ಧೃತಿಗಡೆಬಾರದು. ಇನ್ನೆರಡು ದಿನಗಳಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸುವರು. ವಿದ್ಯುತ್ ವ್ಯತ್ಯ ಆಗಿರುವುದರಿಂದ ತಾತ್ಕಾಲಿಕವಾಗಿ ಟ್ಯಾಂಕರ್‌ಗಳನ್ನು ಬಳಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲೋಕೇಶ್ ಅವರ ಸಾವನ್ನು ಸಹಜ ಸಾವು ಎಂದು ಪರಿಗಣಿಸದೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದರು.
25-30 ವರ್ಷಗಳಿಂದ ಬೆಳೆಸಿದ್ದ ಅಡಿಕೆ ಮರಗಳು ನೆಲಕಚ್ಚಿರುವುದು ನೋವಿನ ಸಂಗತಿ. ಪ್ರಕೃತಿ ವಿಕೋಪಗಳು ಅನಿರೀಕ್ಷಿತ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು. ಸದ್ಯದ ಮಾಹಿತಿ ಪ್ರಕಾರ ಈ ಭಾಗದ 36 ಹಳ್ಳಿಗಳಲ್ಲಿ ಒಂದೇ ರೀತಿಯ ಹಾನಿ ಸಂಭವಿಸಿರುವುದು ಕಂಡುಬಂದಿದೆ. ಅಧಿಕಾರಿಗಳು ಯಾವುದೇ ತಾರತಮ್ಯ ಮಾಡದೆ ನಿಖರ ಮಾಹಿತಿ ಸಂಗ್ರಹಿಸಿ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನು ಪ್ರಾಮಾಣಿಕವಾಗಿ ಕೊಡಿಸಬೇಕು. ಒಂದು ವೇಳೆ ಮನೆಗಳು ಹಾಳಾಗಿದ್ದು, ಸಂತ್ರಸ್ತರು ದುರಸ್ತಿ ಮಾಡಿಕೊಂಡಿದ್ದರೆ ಅದನ್ನೂ ಕೂಡ ಪರಿಗಣಿಸಿ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಅರತೊಳಲು ವಡ್ಡರಹಟ್ಟಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಖಾತೆ ಇಲ್ಲ ಎಂದು ನಿವಾಸಿಗಳು ಸಚಿವರ ಗಮನಕ್ಕೆ ತಂದರು. ಬೆಳೆ ಹಾನಿ ಬಗ್ಗೆ ಸಮಗ್ರ ವರದಿ ಪಡೆದು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು. ಜತೆಗೆ ಮುಂದಿನ ಅಧಿವೇಶನದಲ್ಲಿ ಗಮನ ಸೆಳೆಯಲಾಗುವುದು. ಬೆಳೆ ಮತ್ತು ಮನೆಹಾನಿ ಕುರಿತು ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂ ಸಿಇಒ ಎನ್.ಹೇಮಂತ್, ತಹಸೀಲ್ದಾರ್ ಪರಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಶ್ರೀನಿವಾಸ್ ಕರಿಯಣ್ಣ, ಆರ್.ಉಮೇಶ್, ಎಚ್.ಜಿ.ಮಲ್ಲಯ್ಯ, ಎಸ್.ಪಿ.ಜಯದೇವಪ್ಪ, ಕೆ.ಆರ್.ಶ್ರೀಧರ್, ಎಚ್.ಎನ್.ನಾಗರಾಜ್, ಮಹೇಶ್ವರಪ್ಪ ಗೌಡ, ಸಿದ್ದಲಿಂಗಪ್ಪ, ಯಲ್ಲೋಜಿ ರಾವ್, ಡಿ.ವಿ ಸುರೇಶ್. ಮಂಜುನಾಥ್, ಕೃಷ್ಣೋಜಿ ರಾವ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net