ಬೆಳೆ ವಿಮೆ ಕಂತು ಪಾವತಿ ಸೂಕ್ತ | Agrarian society meeting

ಶಿಕಾರಿಪುರದಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರ ಮಹದೇವಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ಹುಲ್ಮಾರ್ ಮಹೇಶ್, ರಾಮನಗೌಡ, ವೇಣುಗೋಪಾಲ, ಕಿರಣ್‌ಕುಮಾರ್ ಹರ್ತಿ ಇತರರಿದ್ದರು.
ಶಿಕಾರಿಪುರದಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರ ಮಹದೇವಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ಹುಲ್ಮಾರ್ ಮಹೇಶ್, ರಾಮನಗೌಡ, ವೇಣುಗೋಪಾಲ, ಕಿರಣ್‌ಕುಮಾರ್ ಹರ್ತಿ ಇತರರಿದ್ದರು.
Published on
ಶಿಕಾರಿಪುರ: ಈ ಬಾರಿ ಮಳೆ ಕೊರತೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬೆಳೆ ವಿಮೆ ಕಂತು ಪಾವತಿಗೆ ಮುಂದಾಗಬೇಕು ಎಂದು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರ ಮಹದೇವಪ್ಪ ತಿಳಿಸಿದರು.
ಪಟ್ಟಣದ ಕೃಷಿಕ ಸಮಾಜದ ಸಭಾಭವನದಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶೇ.35ರಷ್ಟು ಮೆಕ್ಕೆಜೋಳ ಬಿತ್ತನೆಯಾಗಿದ. ಹವಾಮಾನ ಆಧಾರಿತ ಬೆಳೆ ವಿಮೆ ನೀಡಲಾಗುತ್ತಿದೆ. ಕಳೆದ ಬಾರಿ ಮಳೆ ಮಾಪನ ಕೇಂದ್ರಗಳ ಸಮಸ್ಯೆಯಿಂದ ಪರಿಹಾರದಲ್ಲಿ ಅಡಚಣೆಯಾಗಿತ್ತು. ಈ ಬಾರಿ ಆ ರೀತಿ ಸಮಸ್ಯೆ ಆಗುವುದಿಲ್ಲ. ಕಂತು ಪಾವತಿಗೆ ಜು.31ರವರೆಗೆ ಅವಕಾಶವಿದೆ ಎಂದರು.
ಸಕಾಲದಲ್ಲಿ ಮಳೆ ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಯೂರಿಯಾ ರಸಗೊಬ್ಬರ ಕೊರತೆ ಒಂದೆಡೆಯಾದರೆ, ರೈತರು ಯೂರಿಯಾವನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಮಣ್ಣಿನ ಲವತ್ತತೆ ನಶಿಸುತ್ತಿರುವ ಮುನ್ಸೂಚನೆಯಿಂದ ಯೂರಿಯಾ ಗೊಬ್ಬರ ಕಡಿಮೆ ಬಳಸುವಂತೆ ಸರ್ಕಾರ ಸೂಚಿಸಿದೆ. ಆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.
ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಅಂಶಗಳನ್ನು ಒದಗಿಸುವ ರಸಗೊಬ್ಬರಗಳನ್ನು ಮಾತ್ರ ಬೆಳೆಗಳಿಗೆ ನೀಡಲು ಬಳಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಸಿದರೆ ರಾಸಾಯನಿಕಗಳು ಭೂಮಿಯಲ್ಲಿ ಉಳಿದು ಮುಂದೆ ವಿಷವಾಗಿ ಪರಿವರ್ತನೆ ಆಗುತ್ತವೆ. ಇದರಿಂದ ಮಣ್ಣಿನ ಆರೋಗ್ಯ ಹದಗೆಡುತ್ತದೆ. ಇದರಿಂದ ಇಳುವರಿಯೂ ಕುಂಠಿತವಾಗುತ್ತದೆ ಎಂದು ಹೇಳಿದರು.
ರಾಜ್ಯ ಸರಕಾರ ಯಾವುದೇ ರಸಗೊಬ್ಬರ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಯೂರಿಯಾ ಗೊಬ್ಬರ ದರ ಮಾರುಕಟ್ಟೆಯಲ್ಲಿ 2 ಸಾವಿರ ರೂ. ಇದ್ದರೂ ರೈತರಿಗೆ ಸಬ್ಸಿಡಿ ದರದಲ್ಲಿ 260 ರೂ.ಗೆ ನೀಡುತ್ತಿದೆ. ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್, ಉಪಾಧ್ಯಕ್ಷ ಮುನಿಯಪ್ಪ, ರಾಮನಗೌಡ, ನಿರ್ದೇಶಕರಾದ ಬಿ.ಸಿ.ವೇಣುಗೋಪಾಲ್, ಪುಷ್ಪಾ ಶಿವಕುಮಾರ್, ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಶ್ರೀಧರ್, ನೀರಾವರಿ ಇಲಾಖೆ ಕಿರಿಯ ಇಂಜಿನಿಯರ್ ನಾಗರಾಜ್, ಪಶುವೈದ್ಯ ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net