ಆರ್‌ಎಸ್‌ಎಸ್ ಬಗ್ಗೆ ಅರಿವಿಲ್ಲದವರಿಂದಷ್ಟೇ ಟೀಕೆ I aligation about rss

ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಭಿಮತ
  • ಪ್ರಿಯಾಂಕ್, ಹರಿಪ್ರಸಾದ್ ವಿರುದ್ಧ ವಾಗ್ದಾಳಿ
  • ವಂದೇ ಮಾತರಂಗೆ ಕಾಂಗ್ರೆಸ್ ಅವಮಾನ ಆರೋಪ
ಶಿವಮೊಗ್ಗ : ಪಕ್ಷ ಸಂಘಟನೆ ಮಾಡಲಿ ಎಂದು ಬಿ.ಕೆ.ಹರಿಪ್ರಸಾದ್ (hariprasad) ಅವರಿಗೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಚೆನ್ನಾಗಿ ಕೆಲಸ ಮಾಡಲಿ ಎಂದು ಪ್ರಿಯಾಂಕ್ (priyank) ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಆದರೆ ಇವರಿಬ್ಬರೂ ತಮ್ಮ ಕೆಲಸ ಬಿಟ್ಟು ಆರ್‌ಎಸ್‌ಎಸ್ (rss) ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಬಿ.ಕೆ.ಹರಿಪ್ರಸಾದ್‌ಗೆ ಆರ್‌ಎಸ್‌ಎಸ್‌ನ ಮಹತ್ವವೇನು ಗೊತ್ತು? ಇವರಿಬ್ಬರ ಜತೆಗೆ ಸಚಿವ ಯತೀಂದ್ರ ಕೂಡ ಸೇರಿಕೊಂಡಿದ್ದಾರೆ. ಯತೀಂದ್ರ ಅವರ ಅಪ್ಪ ಆರ್‌ಎಸ್‌ಎಸ್ ಟೀಕಿಸಿ ಈಗ ಸಿಎಂ ಸ್ಥಾನದಿಂದ ಇಳಿದು ಮನೆ ಸೇರಿದ್ದಾರೆ. ಮುಸ್ಲಿಮರ ಓಲೈಕೆಯೇ ಆರ್‌ಎಸ್‌ಎಸ್ ಟೀಕಿಸುವವರ ಏಕಮಾತ್ರ ಉದ್ದೇಶ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಗೃಹ ಸಚಿವ ಎಲ್.ಕೆ.ಆಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಇವರೆಲ್ಲರೂ ಆರ್‌ಎಸ್‌ಎಸ್‌ನಿಂದಲೇ ಬಂದವರು. ದೇಶವನ್ನು ಜಗತ್ತಿನಲ್ಲಿಯೇ ಮಾದರಿಯಾಗಿ ತೋರಿಸಲು ಹೊರಟವರು. ಇಂತಹ ಆರ್‌ಎಸ್‌ಎಸ್ ಬಗ್ಗೆ ಚಿಲ್ಲರೆ ವ್ಯಕ್ತಿಗಳು ಮಾತನಾಡುತ್ತಿರುವುದು ಅವರ ಯೋಗ್ಯತೆಯ ಸೂಚಕವಾಗಿದೆ ಎಂದು ಹೇಳಿದರು.

ವಂದೇ ಮಾತರಂಗೆ ಕಾಂಗ್ರೆಸ್ ವಿರೋಧ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಂದೇ ಮಾತರಂಗೆ ಅವಮಾನ ಮಾಡಿರುವುದು ರಾಷ್ಟ್ರವೇ ತಲೆತಗ್ಗಿಸಬೇಕಾದ ಘಟನೆ. ಸ್ವಾತಂತ್ರೃ ಹೋರಾಟದ ಕಿಚ್ಚು ಹತ್ತಿಸಿದ ವಂದೇ ಮಾತರಂಗೆ 150 ವರ್ಷಗಳ ಇತಿಹಾಸವಿದೆ. ಅನೇಕ ಹೋರಾಟಗಾರರು ಇದರಿಂದ ಪ್ರೇರಣೆ ಪಡೆದಿದ್ದಾರೆ. ಸೋನಿಯಾಗೆ ನಮ್ಮ ದೇಶದ ಹೋರಾಟವೇ ಗೊತ್ತಿಲ್ಲ. ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಕಡೇ ಪಕ್ಷ ಅದನ್ನು ಅರಿಯುವ ಪ್ರಯತ್ನವಾದರೂ ಮಾಡಬೇಕಿತ್ತು ಎಂದು ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಸೋನಿಯಾ ಗಾಂಧಿ ನಡೆಯಿಂದ ಆ ಪಕ್ಷದ ನಾಯಕರಿಗೆ ಬೇಸರವಾಗಿದೆ. ಈಗಲಾದರೂ ಕಾಂಗ್ರೆಸ್‌ನ ಯಾವುದಾದರೂ ನಾಯಕರು ಸೋನಿಯಾ ಗಾಂಧಿಗೆ ದೇಶಪ್ರೇಮ, ವಂದೇ ಮಾತರಂ, ಇಲ್ಲಿ ನಡೆದ ಸ್ವಾತಂತ್ರೃ ಹೋರಾಟ ಮುಂತಾದ ವಿಚಾರಗಳ ಬಗ್ಗೆ ವಿವರಿಸಬೇಕು ಎಂದರು.
"

ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಬದಲಾವಣೆಗಳಾಗುತ್ತಿವೆ. ಕರ್ನಾಟಕದಲ್ಲೂ ಬದಲಾವಣೆಯ ನಿರೀಕ್ಷೆಯಿದೆ. ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣವನ್ನು ಎದುರುನೋಡುತ್ತಿದ್ದೇನೆ. ಬಿಜೆಪಿಯ ಶಿಸ್ತಿನ ಸಿಪಾಯಿಯಾದ ನಾನು ಪಕ್ಷದ ಬದಲಾವಣೆ ಬಯಸುತ್ತೇನೆ. ಆಗುತ್ತದೆ ಎಂಬ ವಿಶ್ವಾಸವೂ ಇದೆ.

— ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net