ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಮೂಡಿಸಿ | music programme
ಸಾಗರದಲ್ಲಿ ಆಯೋಜಿಸಿದ್ದ ಋತುಗಾನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್ ಅವರನ್ನು ಗೌರವಿಸಲಾಯಿತು. ಡಾ. ರವೀಂದ್ರ ಗುರುರಾಜ ಕಟೋಟಿ, ಜಿ.ಎಸ್.ಹೆಗಡೆ, ಮಾಧವ ಚಿಪ್ಪಳಿ, ಆದಿತ್ಯ ಪಲ್ಲಕ್ಕಿ, ರೇಷ್ಮಾ ಭಟ್ ಇದ್ದರು.
ಸಾಗರ: ಪ್ರತಿ ಋತುವಿನಲ್ಲೂ ಪ್ರಕೃತಿಯಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಇದನ್ನು ಸಂಗೀತದ ಮೂಲಕ ಪರಿಚಯಿಸುವ ಅಪರೂಪದ ಕಾರ್ಯಕ್ರಮವನ್ನು ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ಹಾಗೂ ಸಪ್ತಕ ಬೆಂಗಳೂರು ಇವರ ಸಹಯೋಗದಲ್ಲಿ ಋತುಗಾನ-ವ್ಯಾಖ್ಯಾನ ಎನ್ನುವ ಕಾರ್ಯಕ್ರಮವನ್ನು ಶನಿವಾರ ಸಾಗರದ ಕುಡುಪಲಿ ಸದಾನಂದ ಸ್ವರಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರಾಗಭಾವ ಮತ್ತು ಸೌಂದರ್ಯದ ಮೂಲಕ ಸಂಗೀತಯಾನ ಎನ್ನುವ ವೈಶಿಷ್ಟೃಪೂರ್ಣ ಕಾರ್ಯಕ್ರಮವನ್ನು ಡಾ. ರವೀಂದ್ರ ಗುರುರಾಜ್ ಕಟೋಟಿ ಪರಿಕಲ್ಪನೆಯಲ್ಲಿ ಮೂಡಿಬಂತು. ಋತುವಿನ ಬದಲಾವಣೆಗಳನ್ನು ಗಾಯನ ಪ್ರಭೆಯ ಮೂಲಕ ಆದಿತ್ಯ ಪಲ್ಲಕ್ಕಿ ಮತ್ತು ರೇಷ್ಮಾ ಭಟ್ ತೆರೆದಿಟ್ಟರು. ಮೂರು ತಾಸುಗಳ ಗಾಯನ ಜನಮನ ಸೆಳೆಯಿತು
ಪ್ರತಿಯೊಂದು ಋತುವಿನ ಬಗ್ಗೆ ಇರುವ ಮಹತ್ವ, ಪುರಾಣದ ಉಲ್ಲೇಖಗಳನ್ನು ಒಳಗೊಂಡಂತೆ ನಾಡಿನ ಕವಿಗಳ ಕಲ್ಪನೆಗಳನ್ನು ವ್ಯಾಖ್ಯಾನಿಸಿದ ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್.ಗಣೇಶ್ ಮಾತನಾಡಿ, ಈ ಸಂಗೀತ ಕಾರ್ಯಕ್ರಮ ಕನ್ನಡ ಸಾಹಿತ್ಯದ ಜತೆಗೆ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಪರಂಪರೆಯ ಪ್ರಯಾಣವನ್ನು ಪರಿಚಯಿಸಿ ವಿನೂತನ ಪ್ರಯೋಗವನ್ನು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಡಾ. ರವೀಂದ್ರ ಗುರುರಾಜ ಕಟೋಟಿ ಅವರ ಪ್ರಯತ್ನ ಸಂಗೀತಾಭಿಮಾನಿಗಳ ಮನ ಮುಟ್ಟಿದೆ ಎಂದರು.
ಎಲ್ಲ ಕಾಲದಲ್ಲಿಯೂ ಕಲೆಯನ್ನು ಆಸ್ವಾದಿಸುವ, ಅದನ್ನು ರುಚಿಸುವಂತೆ ಮಾಡುವ ಯುವಜನರನ್ನು ತನ್ನತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ಆಧುನಿಕವಾಗಿ ಸಾಕಷ್ಟು ಕಲೆಗಳಿವೆ. ಆದರೆ ಅದು ಕ್ಷಣಿಕವಾಗಿ ಸಂತೋಷವನ್ನು ಕೊಡಬಹುದು. ಶಾಸ್ತ್ರೀಯ ಸಂಗೀತ, ಜನಪದ ಕಲೆಗಳು ಗಟ್ಟಿತನ ಹೊಂದಿವೆ. ಈ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದು ಹೇಳಿದರು.
ಡಾ. ಆರ್.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಜಿ.ಎಸ್.ಹೆಗಡೆ, ಕಿರಣ್, ಮಾಧವ ಚಿಪ್ಪಳಿ, ವಿಮರ್ಶಕ ಟಿ.ಪಿ.ಅಶೋಕ, ವೈ.ಎ.ದಂತಿ ಇತರರಿದ್ದರು.