ಸಾಗರದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶವನ್ನು ಸಾಹಿತಿ ಭುವನೇಶ್ವರಿ ಹೆಗಡೆ ಉದ್ಘಾಟಿಸಿದರು. ಡಾ. ಗಿರಿಧರ ಕಜೆ, ಪ್ರಸನ್ನ ಕೆರೆಕೈ, ಆರ್.ಎಂ.ಹೆಗಡೆ ಬಾಳೆಸರ ಮತ್ತಿತರರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಸಾಗರ
ಆಧುನಿಕ ಜಗತ್ತಿನ ವಿಚಾರಧಾರೆಯ ನಡುವೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವುದು ಸುಲಭದ ಮಾತಲ್ಲ. ಆದರೆ ಭವಿಷ್ಯದ ಬದುಕಿಗಾಗಿ ಅದನ್ನು ಪರಿಚಯಿಸಲೇಬೇಕಾದ ಅಗತ್ಯವಿದೆ ಎಂದು ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದರು.
ಸಾಗರದ ರಾಘವೇಶ್ವರ ಸಭಾಭವನದಲ್ಲಿ ಭಾನುವಾರ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶ ಜ್ಞಾನಮ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮುಗ್ಧತೆಯನ್ನು ಸಂಭ್ರಮಿಸುತ್ತ, ಅವರಲ್ಲಿ ಜ್ಞಾನದೀವಿಗೆ ಬೆಳಗಿಸುತ್ತ
ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಶಿಕ್ಷಕ ಸಮೂಹ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.
ಈ ಹಿಂದೆ ಶಿಕ್ಷಕರು ಭದ್ರತೆಯ ನೆರಳಿನಲ್ಲಿ ಮಕ್ಕಳಿಗೆ ಬೋಧಿಸುತ್ತಿದ್ದರು. ಬದಲಾದ ದಿನಮಾನಗಳಲ್ಲಿ ಶಿಕ್ಷಕರನ್ನು ಅಭದ್ರತೆ ಕಾಡುತ್ತಿದೆ. ಮಕ್ಕಳಿಗೆ ಬೈದು ಬುದ್ಧಿಮಾತು ಹೇಳದಂತೆ ಬೆಳೆಸುವ ಸವಾಲಿನ ಸ್ಥಿತಿ ಶಿಕ್ಷಕರ ಎದುರಿಗಿದೆ. ಶಿಕ್ಷಕ ದಿನಾಚರಣೆಗಳು ಶಿಕ್ಷಕ ಸಮೂಹದ
ಆಗುಹೋಗುಗಳ ಕುರಿತು ಚಿಂತನೆ ನಡೆಸುವ ಬದಲು ಯಾರನ್ನೋ ಓಲೈಸುವ, ಮೆರೆಸುವ ಕಾರ್ಯಕ್ರಮವಾಗಿ ಮಾರ್ಪಾಡಾಗುತ್ತಿರುವುದು ವಿಪರ್ಯಾಸ. ನಿಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಮಕ್ಕಳಿಗೆ ಬೋಧಿಸುವ ಹಕ್ಕು ಸಹ ಮೊಟಕುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ವಿನಾಯಕ ಭಟ್ ಮೂರೂರು ಮಾತನಾಡಿ, ಹಿಂದೆ ಶಿಷ್ಯರು ಶಾಲಾರಂಭಕ್ಕೆ ತಳಿರು ತೋರಣ ಕಟ್ಟಿ ಗುರುಗಳನ್ನು ಬರಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇದೀಗ ಶಿಕ್ಷಕರೇ ತೋರಣ ಕಟ್ಟಿ ಶಾಲೆಯ ಬಾಗಿಲಿನಲ್ಲಿ ಮಕ್ಕಳಿಗೆ ಕೈಮುಗಿದು
ಒಳಗೆ ಬನ್ನಿ ಎಂದು ಕರೆಯುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಆದ್ಯತೆ ನೀಡುವ ಭರಾಟೆಯಲ್ಲಿ ಶಿಕ್ಷಕ ಸಮೂಹದ ಹಕ್ಕು ಕಿತ್ತುಕೊಳ್ಳುವ, ತನ್ಮೂಲಕ ಅವರನ್ನು ಅವಮಾನಿಸುವ ಕೆಲಸ ಆಗುತ್ತಿರುವುದನ್ನು ಯಾರೂ ಗಮನಿಸದೇ ಇರುವುದು ವಿಪರ್ಯಾಸ
ಎಂದರು.
ಕೇಂದ್ರ ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ ಅವರನ್ನು ಸನ್ಮಾನಿಸಲಾಯಿತು. ಮಹಾಸಭಾ ಉಪಾಧ್ಯಕ್ಷರಾದ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ್‌ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ ಸಂಪಾ, ತಿಮ್ಮಪ್ಪ, ದತ್ತಾತ್ರೇಯ ಭಟ್,
ಎಂ.ಎನ್.ಗಜಾನನ, ಸುಬ್ರಹ್ಮಣ್ಯ ಇತರರಿದ್ದರು.
ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಹವ್ಯಕ ಶಿಕ್ಷಕರು ಜ್ಞಾನದಾಸೋಹ ಕಾರ್ಯವನ್ನು ಸಾರ್ಥಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹವ್ಯಕ ಶಿಕ್ಷಕರಲ್ಲಿ ಶುದ್ಧಭಾಷೆ, ಪ್ರಾಚೀನ ವಿದ್ಯೆ, ಬುದ್ಧಿವಂತಿಕೆ, ಸಂಸ್ಕಾರ, ಸಂಸ್ಕೃತಿ, ಆಹಾರ ಪದ್ಧತಿ, ಆಚರಣೆ, ಪ್ರತಿಭೆ ಎಲ್ಲವೂ ಇರುವುದರಿಂದ
ಅವರು ಯಶಸ್ವಿ ಶಿಕ್ಷಕರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಇವೆಲ್ಲ ಗುಣಗಳ ಜತೆಗೆ ಮನೆ ಪರಿಸರ ಸಹ ಹವ್ಯಕ ಶಿಕ್ಷಕರ ಶ್ರೇಷ್ಠತೆ ಕಾಪಾಡುವಲ್ಲಿ ಸಹಕಾರಿ.