ಕೃಷಿ ಇಲಾಖೆ ನೇಮಕಾತಿಯಲ್ಲಿ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ಉಪತಹಸೀಲ್ದಾರ್ ಶಾಂತಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ, ಕೊಟ್ರೇಶ್, ಭಾಗ್ಯಲಕ್ಷ್ಮೀ, ಪ್ರಥಮ್, ಸಾಗರಿಕಾ, ಕಾಶಿನಾಥ್, ದಿನೇಶ್ ಶಿರವಾಳ ಇತರರಿದ್ದರು.
ಆನಂದಪುರ: ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕೃಷಿ ಅಧಿಕಾರಿ (ಎಒ) ಹಾಗೂ ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ನೇಮಕಾತಿಯಲ್ಲಿ ಇಲಾಖೆಯ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮಗಳನ್ನು ಗಾಳಿಗೆ ತೂರಿ ಅನ್ಯ ಪದವೀಧರರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಆರೋಪಿಸಿ ಉಪತಹಸೀಲ್ದಾರ್ ಶಾಂತಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಕೃಷಿ ಅಧಿಕಾರಿ ಹುದ್ದೆಗಳು ತಾಂತ್ರಿಕ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆಗಳು. ನಿಯಮಗಳ ಪ್ರಕಾರ ಇವುಗಳಿಗೆ ಸೂಕ್ತ ಕೃಷಿ ಶಿಕ್ಷಣ ಮತ್ತು ಕ್ಷೇತ್ರ ಮಟ್ಟದ ತರಬೇತಿ ಹೊಂದಿದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು. ಆದರೆ ಪ್ರಸ್ತುತ ನೇಮಕಾತಿಯಲ್ಲಿ ಖಾಸಗಿ ವಿಶ್ವವಿದ್ಯಾಲಯದ (ರಾಯ್ ಟೆಕ್) ವಿದ್ಯಾರ್ಥಿಗಳಿಗೆ ಹಾಗೂ ಬಿಇ ಬಯೋಟೆಕ್ನಾಲಜಿ ಪದವೀಧರರಿಗೂ ಅವಕಾಶ ನೀಡಿರುವುದು ಕೃಷಿ ಪದವೀಧರರ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಪ್ರಕಟಿಸಿರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಬೇಕು. ಕೃಷಿ ಇಲಾಖೆಯ ಎಲ್ಲ ತಾಂತ್ರಿಕ ಹುದ್ದೆಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಮಾನ್ಯತೆ ಪಡೆದ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು. ರಾಜ್ಯದಲ್ಲಿರುವ ಖಾಸಗಿ ಕೃಷಿ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ವರ್ಷದಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಾತಿ ಸಂಪೂರ್ಣ ತಡೆಹಿಡಿಯಬೇಕು. ಬೋಧನಾ ಗುಣಮಟ್ಟ ಹಾಗೂ ಮೂಲ ಸೌಕರ್ಯದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೀತಿಯಂತೆ ಕೃಷಿ ಇಲಾಖೆ ನೇಮಕಾತಿಯಲ್ಲೂ ಶೇ.2ರಷ್ಟು ಕ್ರೀಡಾ ಮೀಸಲಾತಿ ಜಾರಿಗೊಳಿಸಬೇಕು. ಕೃಷಿ ವಿಜ್ಞಾನದ ಪರಿಜ್ಞಾನ ಇಲ್ಲದವರಿಗೆ ತರಬೇತಿ ನೀಡಿ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಕ್ಕೆ ಅವಕಾಶ ನೀಡುವ ‘ದೇಸಿ’ ಕಾರ್ಯಕ್ರಮವನ್ನು ರದ್ದುಪಡಿಸಬೇಕು. ಕೃಷಿ ಪರಿಕರ ಮಾರಾಟಕ್ಕೆ ಕೃಷಿ ಪದವಿಯನ್ನೇ ಕಡ್ಡಾಯಗೊಳಿಸಬೇಕು. ಸಾವಿರಾರು ಕೃಷಿ ಪದವೀಧರರ ಭವಿಷ್ಯಕ್ಕೆ ಧಕ್ಕೆ ಉಂಟಾಗಿದ್ದರೂ ಸರ್ಕಾರ ಮತ್ತು ಇಲಾಖೆ ಮೌನ ವಹಿಸಿವೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕೃಷಿ ವಿವಿ ವಿದ್ಯಾರ್ಥಿಗಳಾದ ರಾಘವೇಂದ್ರ, ಕೊಟ್ರೇಶ್, ಭಾಗ್ಯಲಕ್ಷ್ಮೀ, ಪ್ರಥಮ್, ಸಾಗರಿಕಾ, ಕಾಶಿನಾಥ್, ಪ್ರಕೃತಿ, ನಿಧಿಶ್ರೀ, ವೈಷ್ಣವಿ, ರೈತ ಸಂಘಟನೆ ಮುಖಂಡರು ಇದ್ದರು.