ಮದುವೆ ಸಮಾರಂಭದ ದುಂದುವೆಚ್ಚ ನಿಯಂತ್ರಿಸಿ

ಭದ್ರಾವತಿಯ ಸಿದ್ಧಾರೂಢ ನಗರದಲ್ಲಿ ಆಯೋಜಿಸಿದ್ದ 42ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕೂಡ್ಲಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಮಾತನಾಡಿದರು. ಗೀತಾ ರಾಜಕುಮಾರ್,  ವೆಂಟಕರಮಣ ಶೇಟ್ ಇತರರಿದ್ದರು.
ಭದ್ರಾವತಿಯ ಸಿದ್ಧಾರೂಢ ನಗರದಲ್ಲಿ ಆಯೋಜಿಸಿದ್ದ 42ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕೂಡ್ಲಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಮಾತನಾಡಿದರು. ಗೀತಾ ರಾಜಕುಮಾರ್, ವೆಂಟಕರಮಣ ಶೇಟ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೂಡ್ಲಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಸಲಹೆ
  • ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಆಗುತ್ತಿರುವ ಮದುವೆ
  • ಭದ್ರಾವತಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ
ಭದ್ರಾವತಿ: ವಿವಾಹ ಸಮಾರಂಭಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಕೂಡ್ಲಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್, ವಿಶ್ವಭಾರತಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಸಿದ್ಧಾರೂಢ ನಗರದಲ್ಲಿ ಆಯೋಜಿಸಿದ್ದ 42ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆರೋಗ್ಯ ಹಾಗೂ ವಿವಾಹಕ್ಕೆ ಹೆಚ್ಚುತ್ತಿರುವ ವೆಚ್ಚವು ಮಧ್ಯಮ ವರ್ಗ, ಬಡ ಕುಟುಂಬಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಆರೋಗ್ಯ ವಿಮೆ ಮೂಲಕ ಭರಿಸಲು ಅವಕಾಶವಿದೆ. ವಿವಾಹಕ್ಕೆ ನಡೆಯುವ ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಸರಳವಾಗಿ ಮದುವೆಯಾಗುವುದನ್ನು ಜನಪ್ರಿಯಗೊಳಿಸಬೇಕು ಎಂದು ತಿಳಿಸಿದರು.
ಪ್ರತಿಷ್ಠೆ ಪ್ರದರ್ಶನ ಸಲ್ಲ
ಇತ್ತೀಚಿನ ವರ್ಷಗಳಲ್ಲಿ ವಿವಾಹ ಎನ್ನುವುದು ಸಾಮಾಜಿಕ ಅಂತಸ್ತು ಹಾಗು ಪ್ರತಿಷ್ಠೆ ಪ್ರದರ್ಶಿಸುವ ವೇದಿಕೆಯಾಗಿ ದುಂದುವೆಚ್ಚ ಹೆಚ್ಚಾಗುತ್ತಿದೆ ಎಂದು ಕೂಡ್ಲಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಗಳಿಕೆಯ ಬಹುಪಾಲು ಹಣವನ್ನು ಇದಕ್ಕೆ ವೆಚ್ಚ ಮಾಡುವ ಸ್ಥಿತಿ ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇತ್ತೀಚಿಗೆ ಆರ್ಥಿಕ ಮಿತವ್ಯಯ ರೂಢಿಸಿಕೊಳ್ಳಲು ಕರೆ ನೀಡಿದ್ದು, ಆಡಂಬರದ ಮದುವೆ ಬದಲು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ದಾಂಪತ್ಯ ಆಗುವ ಬಗ್ಗೆ ಚಿಂತನೆ ನಡೆಯಬೇಕು ಎಂದು ತಿಳಿಸಿದರು.
ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ವಿಶೇಷ ಮಹತ್ವ ಇದೆ. ವಿವಾಹದ ಮೂಲಕ ನೈತಿಕ ಚೌಕಟ್ಟಿನೊಳಗೆ ಗಂಡು-ಹೆಣ್ಣು ದಾಂಪತ್ಯ ಜೀವನ ನಡೆಸುತ್ತಾರೆ. ಧರ್ಮ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಮಕ್ಕಳಿಗೆ ಧರ್ಮಮಾರ್ಗದಲ್ಲಿ ಶಿಕ್ಷಣ ನೀಡುತ್ತಾರೆ. ಮಕ್ಕಳನ್ನು ರಾಷ್ಟ್ರ ನಿರ್ಮಾಣ ಹಾಗೂ ಸಮಾಜ ನಿರ್ಮಾಣ ಕಾರ್ಯಕ್ಕೆ ಅರ್ಪಿಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಪಡೆದ ತಾಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸದಸ್ಯ ಬಿ.ಕೆ.ಮೋಹನ್, ವಿಶ್ವ ಹಿಂದೂ ಪರಿಷತ್‌ನ ವೆಂಕಟರಮಣ ಶೇಟ್, ರಮೇಶ್ ಬಾಬು, ಹಾ.ರಾಮಪ್ಪ, ನಾರಾಯಣ ಜಿ. ವರ್ಣೇಕರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net