ಭದ್ರಾವತಿ: ಬಡವರಿಗೆ ನೀಡುತ್ತಿರುವ ವಿವಿಧ ಪಿಂಚಣಿಗಳು ರದ್ದಾಗಿದ್ದು, ಅರ್ಹರಿಗೆ ಕೂಡಲೇ ಪಿಂಚಣಿ ಮುಂದುವರಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಮುಖರು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬಿಇಒ ಕಚೇರಿ ಪಕ್ಕದ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದ ಜಾಗವನ್ನು ಖಾಸಗಿಯವರು ಲೂಟಿ ಮಾಡಲು ಸಂಚು ನಡೆಸಿದ್ದಾರೆ. ತಕ್ಷಣ ಉದ್ಯಾನ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ರಾಜ್ಯ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಶಿವಮೊಗ್ಗ, ಭದ್ರಾವತಿ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಬೇಕು ಎಂದು ಆಗ್ರಹಿಸಿದರು.
ಕಲ್ಲಾಪುರ ಗ್ರಾಮದ ರಂಗಾಪುರ ಸರ್ವೇ ನಂ. 1ರಲ್ಲಿ 74 ಎಕರೆ ಕಂದಾಯ ಜಮೀನಿದೆ. 24 ಜನರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಸಾಗುವಳಿ ಪತ್ರ ಮಂಜೂರು ಮಾಡಬೇಕು. ನವಲೇ ಬಸಾಪುರ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ನಿವೇಶನ ರೈತರಿಗೆ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಸೋಮಣ್ಣ, ಎಂ.ವಿ.ಚಂದ್ರಶೇಖರ್, ಅಕ್ರಂ ಖಾನ್, ಶ್ರೀನಿವಾಸ್, ಶ್ರೀಧರ್, ಏಕಾಂತಪ್ಪ, ವರಲಕ್ಷ್ಮೀ, ನೀಲಮ್ಮ, ವಿಶಾಲಾಕ್ಷಿ ಇತರರಿದ್ದರು.