ಲೋಕಕಲ್ಯಾಣಕ್ಕಾಗಿ ಕೆರೆಗಳ ನಿರ್ಮಾಣ | siddarameshwara Jayanti

ಶಿಕಾರಿಪುರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಭೋವಿ ಸಮಾಜದ ಅಧ್ಯಕ್ಷ ಈಶಪ್ಪ, ಮುಖಂಡ ಸಣ್ಣಹನುಮಂತಪ್ಪ ಉದ್ಘಾಟಿಸಿದರು, ಮಂಜುಳಾ ಭಜಂತ್ರಿ, ಸುನಿಲ್ಕುಮಾರ್, ನರಸಿಂಹ ಮೂರ್ತಿ ಇತರರಿದ್ದರು.
ಶಿಕಾರಿಪುರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಭೋವಿ ಸಮಾಜದ ಅಧ್ಯಕ್ಷ ಈಶಪ್ಪ, ಮುಖಂಡ ಸಣ್ಣಹನುಮಂತಪ್ಪ ಉದ್ಘಾಟಿಸಿದರು, ಮಂಜುಳಾ ಭಜಂತ್ರಿ, ಸುನಿಲ್ಕುಮಾರ್, ನರಸಿಂಹ ಮೂರ್ತಿ ಇತರರಿದ್ದರು.
Published on
ಶಿಕಾರಿಪುರ: ವಚನ ಚಳವಳಿಯಲ್ಲಿ ಶ್ರೀ ಸಿದ್ದರಾಮೇಶ್ವರರ ಹೆಸರು ಅಜರಾಮರ. ಬಸವಣ್ಣನವರ ಸಮಕಾಲೀನರಾಗಿದ್ದರು. ಕೇವಲ ಮಂತ್ರ-ಜಪಗಳಿಂದ ಮುಕ್ತಿ ಸಾಧ್ಯವಿಲ್ಲ. ಸಮಾಜದ ಸೇವೆಯೇ ನಿಜವಾದ ಶಿವಪೂಜೆ ಎಂದು ಸಾರಿದ ಕರ್ಮಯೋಗಿ ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ನೊಳಂಬ ವೀರಶೈವ ಸಮಾಜ, ಭೋವಿ ಸಮಾಜ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೊನ್ನಲಿಗೆಯ (ಇಂದಿನ ಸೊಲ್ಲಾಪುರ) ಈ ಮಹಾಶರಣರು ಶೂನ್ಯ ಸಿಂಹಾಸನವನ್ನೇರಿ ಅಧ್ಯಾತ್ಮದ ಉತ್ತುಂಗಕ್ಕೇರಿದವರು. ಸಿದ್ದರಾಮರು ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು
ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣಹನುಮಂತಪ್ಪ ಮಾತನಾಡಿ, ಸಿದ್ದರಾಮೇಶ್ವರರು ಜನರಿಗೆ ನೇರವಾಗಿ ಪ್ರಯೋಜನ ಆಗುವಂತಹ ಕೆಲಸ ಮಾಡಿದರು. ಭೀಕರ ಬರಗಾಲವಿದ್ದ ಕಾಲದಲ್ಲಿ ಜನರಿಗೆ ನೀರು ಒದಗಿಸಲು ಬೃಹತ್ ಕೆರೆಗಳನ್ನು ಕಟ್ಟಿಸಿದರು ಎಂದು ಹೇಳಿದರು.
ತಾಲೂಕು ಭೋವಿ ಸಮಾಜದ ಅಧ್ಯಕ್ಷ ಈಶಪ್ಪ ಮಾತನಾಡಿ. ಸಿದ್ದರಾಮೇಶ್ವರರು ಆರಂಭದಲ್ಲಿ ಕೆರೆ ಕಟ್ಟೆ, ಅರವಟ್ಟಿಗೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆಗ ಅವರನ್ನು ಭೇಟಿಯಾದ ಅಲ್ಲಮ ಪ್ರಭುಗಳು, ಕೆರೆ ಕಟ್ಟಿಸಿದರೆ ಮಣ್ಣು ಕೂಡುವುದು, ದೇಗುಲ ಕಟ್ಟಿಸಿದರೆ ಕಲ್ಲು ಕೂಡುವುದು. ಆದರೆ ಅಂತರಂಗದ ಅರಿವು ಮುಖ್ಯ ಎಂದು ಬೋಧಿಸಿದ್ದರು. ಈ ಸಂವಾದವು ಸಿದ್ದರಾಮರ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು ಎಂದರು.
ಸಿದ್ದರಾಮೇಶ್ವರರು ಅದ್ಭುತ ವಚನಕಾರರು. ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತ ನಾಮದಲ್ಲಿ 60 ಸಾವಿರಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಸಮಾಜದ ತಾರತಮ್ಯದ ವಿರುದ್ಧ ಧ್ವನಿ ಹಾಗೂ ಭಕ್ತಿಯ ಉತ್ತುಂಗವಿದೆ ಎಂದು ಹೇಳಿದರು
ಸುನಿಲ್ಕುಮಾರ್, ನರಸಿಂಹ ಮೂರ್ತಿ, ಸಂತೋಷ್, ನಿವೃತ್ತ ಶಿಕ್ಷಕ ಬಿ.ಪಾಪಯ್ಯ, ಉಪ ತಹಸೀಲ್ದಾರ್ ವಿನಯ್ ಆರಾಧ್ಯ, ಆರ್‌ಐ ಬಸಮ್ಮ, ರಾಜೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net