ಮಾರಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮದಲ್ಲಿ ಎಂ.ಬಿ.ಹರಿಕೃಷ್ಣ, ಮಲ್ಲೇಶಪ್ಪ, ಶ್ರೀನಿವಾಸ್, ಕಿರಣ್, ಕುಬೇಂದ್ರಪ್ಪ ಇತರರಿದ್ದರು.
Published on:
Copied
Follow Us
ಹೊಳೆಹೊನ್ನೂರು: ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ ತಿಳಿಸಿದರು.
ಮಾರಶೆಟ್ಟಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್, ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಹೇಗೆ ಗೌರವ ಕೊಡುತ್ತಿದೆ ಎಂದು ಇತ್ತೀಚೆಗೆ ವಿಧಾನ ಸೌಧದಲ್ಲಿ ನಡೆದ ಬೆಳವಣಿಗೆಯಿಂದ ಕಂಡುಬಂದಿದೆ ಎಂದರು.
ಕಾಂಗ್ರೆಸ್ ಇತ್ತೀಚೆಗೆ ಪ್ರತಿ ಹೆಜ್ಜೆಯಲ್ಲೂ ರಾಜಕೀಯ ಮಾಡುತ್ತಿದೆ. ಎಲ್ಲ ವಿಚಾರದಲ್ಲೂ ಅನುಮಾನ ವ್ಯಕ್ತಪಡಿಸಿ, ದೇಶದ ಸೈನಿಕರು, ನಾಗರಿಕರು, ಚುನಾವಣಾ ಆಯೋಗ ಸೇರಿ ವಿವಿಧ ಇಲಾಖೆಗಳ ಬಗ್ಗೆ ಅಗೌರವ ತೋರುತ್ತಿದೆ. ನಾಗರಿಕರು ತಲೆತಗ್ಗಿಸುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ವಿಬಿ ಜಿ ರಾಮ್ ಜಿ ಕಾರ್ಯಕ್ರಮವನ್ನು ಕೇವಲ ರಾಮ್ ಎಂಬ ಹೆಸರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಹಿಂದೆಯೂ ಹಲವಾರು ಬಾರಿ ಯೋಜನೆಯ ಹೆಸರನ್ನು ಬದಲಾಯಿಸಲಾಗಿದೆ. ಈ ಯೋಜನೆಯಲ್ಲಿ ತಿದ್ದುಪಡಿ ಮಾಡಿ ಕೂಲಿ ಕಾರ್ಮಿಕರಿಗೆ ವೇತನದ ಜತೆಗೆ ಕೆಲಸದ ದಿನಗಳನ್ನು ಹೆಚ್ಚಿಸಿರುವುದರಿಂದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನು ಸಹಿಸದೆ ಕಾಂಗ್ರೆಸ್ ಪಿತೂರಿ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಯೋಜನೆಯಿಂದಾಗಿ ಗ್ರಾಮಗಳನ್ನು ಸರ್ವಾಂಗೀಣ ಅಭಿವೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗಿ ಮಾದರಿ ಗ್ರಾಮವನ್ನಾಗಿಸಲು ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಕಾರ್ಯಕರ್ತರು ಮನೆಮನೆ ಪ್ರಚಾರ ಮಾಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಯುವ ಮೋರ್ಚಾ ಅಧ್ಯಕ್ಷ ಕಿರಣ್, ಮಾಮ್ಕೋಸ್ ಅಧ್ಯಕ್ಷ ಕುಬೇಂದ್ರಪ್ಪ, ಎನ್.ಡಿ.ಸತೀಶ್, ಕೆ.ಪಿ.ಕಿರಣ್ ಕುಮಾರ್, ರಂಗಪ್ಪ, ರುದ್ರೋಜಿರಾವ್, ಯೋಗೀಶ್, ಹರೀಶ್, ಉಜ್ಜನಪ್ಪ ಇತರರಿದ್ದರು.