ನಾರೀ ಶಕ್ತಿ ವಂದನಾ ಮಹಿಳಾ ಮೀಸಲಾತಿ ಕಾಯ್ದೆ ಸೋಲಿಸಿದ ಕಾಂಗ್ರೆಸ್
ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂಬುದು ಮತ್ತೊಂದು ಸುಳ್ಳು
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ
ಶಿವಮೊಗ್ಗ: ಲೋಕಸಭೆಯಲ್ಲಿ ನಾರೀ ಶಕ್ತಿ ವಂದನಾ ಮಹಿಳಾ ಮೀಸಲಾತಿ(Women's reservation) ಕಾಯ್ದೆಯನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳಾ ವಿರೋಧಿಗಳು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಸುತ್ತ ಬರುತ್ತಿದೆ. 60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸದ ಕಾಂಗ್ರೆಸ್(Congress), ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅದನ್ನು ಜಾರಿ ಮಾಡಲು ಬಿಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ಮಸೂದೆ ಮಂಡನೆಯಾಗಿತ್ತು. ರಾಜ್ಯಸಭೆ(Rajya Sabha)ಯಲ್ಲಿ ಅಂಗೀಕಾರವೂ ಆಗಿತ್ತು. ಆದರೆ ಲೋಕಸಭೆಯಲ್ಲಿ ಸೋಲಿಸುವ ಕಾಂಗ್ರೆಸ್ ದೇಶದ ಸಹಸ್ರಾರು ಮಹಿಳೆಯರಿಗೆ ಅನ್ಯಾಯ ಮಾಡಿತ್ತು. ಈಗಲೂ ಅದೇ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ಕಾಯ್ದೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎನ್ನುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ ಎಂದು ಸಂವಿಧಾನವೇ ಹೇಳುತ್ತಿದ್ದರೂ ಮುಸ್ಲಿಮರನ್ನು ಓಲೈಸುವ ಹಠವನ್ನು ಕಾಂಗ್ರೆಸ್ ಇನ್ನೂ ಬಿಟ್ಟಿಲ್ಲ. ಕ್ಷೇತ್ರ ಮರು ವಿಂಗಡಣೆ(Field redistribution) ಮತ್ತು ಮಹಿಳಾ ಮೀಸಲಾತಿ ಎರಡನ್ನೂ ಒಟ್ಟಿಗೆ ತಂದಿದ್ದರಿಂದ ಕಾಯ್ದೆಯನ್ನು ಸೋಲಿಸಿದ್ದೇವೆಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಆದರೆ ಲೋಕಸಭೆಯಲ್ಲಿ ಮತಕ್ಕೆ ಹಾಕಿದ್ದು ಮಹಿಳಾ ಮೀಸಲಾತಿ ಮಾತ್ರ. ಆದರೂ ಕಾಂಗ್ರೆಸ್ ಅದನ್ನು ಬೆಂಬಲಿಸಲಿಲ್ಲ. ಕ್ಷೇತ್ರ ಮರು ವಿಂಗಡಣೆಯಾದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ಮತ್ತೊಂದು ಸುಳ್ಳು ಹೇಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಕಾಚಿನಕಟ್ಟೆ ಸತ್ಯನಾರಾಯಣ, ಕುಬೇರಪ್ಪ, ಎಸ್.ಜಿ.ಬಾಲು ಸುದ್ದಿಗೋಷ್ಠಿಯಲ್ಲಿದ್ದರು.