ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರದ ಕತ್ತರಿ | Guarantee Scheme

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ಹಣಕಾಸಿನ ಕೊರತೆ ನೆಪದಿಂದ ಫಲಾಭವಿಗಳ ಹೊರಗಿಡಲು ಯತ್ನ
  • ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟದ ಸ್ಥಿತಿ
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ತನ್ನದೇ ಗ್ಯಾರಂಟಿ ಯೋಜನೆ(Guarantee Scheme)ಗಳ ಕುರಿತು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದು, ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಲು ಹೊಸ ಮಾನದಂಡ ರೂಪಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President B.Y.Vijayendra) ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳಿಗೆ ಕತ್ತರಿ ಹಾಕುವ ಯತ್ನಕ್ಕೆ ಸರ್ಕಾರ ಮುಂದಾಗಿದ್ದು, ಚುನಾವಣೆಗೆ ಮುನ್ನ ಯಾವುದೆ ಷರತ್ತುಗಳಿಲ್ಲದೆ ಪ್ರತಿಯೊಬ್ಬ ಮನೆಯ ಯಜಮಾನಿಗೂ ಗೃಹಲಕ್ಷ್ಮಿ ಸೇರಿ ಹಲವು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್(Congress) ಭರವಸೆ ನೀಡಿತ್ತು. ಆದರೆ ಈಗ ಹಣಕಾಸಿನ ಕೊರತೆ ನೆಪವಾಗಿಸಿ ಲಕ್ಷಾಂತರ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಹಿಮಾಚಲ ಪ್ರದೇಶ, ತೆಲಂಗಾಣ ಸೇರಿ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗುವ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕವೂ ಇದೇ ಹಾದಿಯಲ್ಲಿ ಸಾಗುತ್ತಿದ್ದು, ಸರ್ಕಾರ(Government) ಈಗ ಒಂದೊಂದೇ ನೆಪ ಹೇಳಿ ಗ್ಯಾರಂಟಿಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ, ಹಣಕಾಸು ಸಚಿವ ಡಿ.ಕೆ.ಶಿವಕುಮಾರ್ ಅವರು ವಾಸ್ತವಾಂಶಗಳನ್ನು ಜನರ ಮುಂದಿಡಬೇಕು. ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಉತ್ತಮ ಆಡಳಿತ ನೀಡುವಲ್ಲಿ ವಿಫಲ

ಸಿಎಂ ಡಿ.ಕೆ.ಶಿವಕುಮಾರ್(CM D.K.Shivakumar) ಅವರ ತಾಳ್ಮೆಯನ್ನು ಅಭಿನಂದಿಸಬೇಕು. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಹಲವು ಊಹಾಪೋಹಗಳ ನಡುವೆ ಅವರು ಸಮಾಧಾನದಿಂದ ಪರಿಸ್ಥಿತಿ ಎದುರಿಸಿದ್ದು, ಈಗ ಅಧಿಕಾರದ ಹಿಡಿತ ಸಾಧಿಸುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಸಹಿಸಲ್ಲ ಎಂಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಅವಿನಾಭಾವ ಸಂಬಂಧವಿದ್ದು, ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಜಯೇಂದ್ರ ದೂರಿದರು.

ಬಿಡದಿ ಭೂಸ್ವಾಧೀನಕ್ಕೆ ವಿರೋಧ

ಬಿಡದಿ ಪ್ರದೇಶದಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಭೂಸ್ವಾಧೀನ(Land acquisition)ಕ್ಕೆ ಶೇ.90ರಷ್ಟು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಒತ್ತಾಯಪೂರ್ವಕವಾಗಿ ಜಮೀನು ಕಸಿದುಕೊಳ್ಳಲು ಮುಂದಾಗಿರುವುದನ್ನು ಬಿ.ವೈ.ವಿಜಯೇಂದ್ರ ಖಂಡಿಸಿದರು. ದೇಶಾದ್ಯಂತ ರೈತರ ಪರ ಮಾತನಾಡುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಪ್ರಕ್ರಿಯೆ ಕೈಬಿಡುವಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net