ಸಮ್ಮೇಳನದ ನಿರ್ಣಯಗಳಿಗೆ ಸಿಗಬೇಕು ಆದ್ಯತೆ

ಹೊಸನಗರ ಸಾಹಿತ್ಯ ಸಮ್ಮೇಳನಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದ ಸರ್ವಾಧ್ಯಕ್ಷ ಡಾ. ಪ್ರಭಾಕರ ಕಾರಂತ್. ಡಿ.ಮಂಜುನಾಥ, ಗಣೇಶಮೂರ್ತಿ, ಅಂಬ್ರಯ್ಯಮಠ ಇತರಿದ್ದರು.
ಹೊಸನಗರ ಸಾಹಿತ್ಯ ಸಮ್ಮೇಳನಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದ ಸರ್ವಾಧ್ಯಕ್ಷ ಡಾ. ಪ್ರಭಾಕರ ಕಾರಂತ್. ಡಿ.ಮಂಜುನಾಥ, ಗಣೇಶಮೂರ್ತಿ, ಅಂಬ್ರಯ್ಯಮಠ ಇತರಿದ್ದರು.
Published on
ಹೊಸನಗರ: ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಲೇ ಇವೆ. ಆದರೆ ಸಮ್ಮೇಳನಗಳ ನಿರ್ಣಯಗಳು, ಅಧ್ಯಕ್ಷ ಭಾಷಣದ ಅಶಯಗಳು, ಗೋಷ್ಠಿಗಳ ವಿಚಾರ ಯಾರ ಗಮನಕ್ಕೆ ಬರಬೇಕಿತ್ತೋ ಅವರು ಗಮನಕ್ಕೇ ತೆಗೆದುಕೊಳ್ಳುತ್ತಿಲ್ಲ ಎಂದು ಸಾಹಿತಿ ಡಾ. ಪ್ರಭಾಕರ ಕಾರಂತ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ 11ನೇ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಕನ್ನಡ ಭಾಷೆ, ನಾಡು ಕುರಿತು ಯಾವುದೇ ಸಲಹೆ ನೀಡುವುದರಲ್ಲಿ ಈಗ ಅರ್ಥವೇ ಉಳಿದಿಲ್ಲ ಎಂದರು.
ಇಂದು ನಮ್ಮ ಶಿಕ್ಷಣ ನೀತಿಯಿಂದಾಗಿ ಕನ್ನಡದಲ್ಲಿ ಯಾವ ವಿಷಯವನ್ನೂ ಹೇಳಿಕೊಡದೇ ಎಲ್ಲವೂ ಇಂಗ್ಲಿಷ್ ಮೂಲಕ ಮಕ್ಕಳಿಗೆ ಅಚ್ಚಾಗುತ್ತಿದೆ. ಇದು ಮೂಲ ಬೇರು ಒಣಗಿಸುವ ಸುಲಭ ಉಪಾಯ. ನಾವು ಲೋಕವನ್ನು ಇಂಗ್ಲಿಷ್ ಕಿಟಕಿ ಮೂಲಕ ನೋಡುವಂತಾಗಿದೆ. ಈ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜವಾಬ್ದಾರಿ ಹೆಚ್ಚು. ‘ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು’ ಎಂಬ ಕವಿವಾಣಿ ನಮ್ಮನ್ನು ಅಣಕಿಸುವ ಪರಿಸ್ಥಿತಿಯಿಂದ ಹೊರಬರುವ ಉಪಾಯವನ್ನು ಕನ್ನಡಪರ ಮನಸ್ಸುಗಳ ನೆರವಿನಿಂದ ಕನ್ನಡ ಸಾಹಿತ್ಯ ಪರಿಷತ್ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಈ ಬಾರಿ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಯಲ್ಲಿ ಕನ್ನಡದಲ್ಲೇ ಹೆಚ್ಚು ಮಕ್ಕಳು ಫೇಲಾಗಿದ್ದಾರೆ ಎಂಬ ಮಾಹಿತಿ ಇದೆ. ಮಕ್ಕಳನ್ನು ಕನ್ನಡದಿಂದ ಪಾಲಕರೇ ದೂರಮಾಡಿದ ಪರಿಣಾಮ ಇದು. ಅವರು ಕನ್ನಡದಲ್ಲಿ ಆಲೋಚಿಸಲು ಬಿಡದೆ, ಮಾತೃಭಾಷೆಯಿಂದ ಅವರನ್ನು ದೂರಮಾಡಿ ನಾವು ಕನ್ನಡ ತಾಯಿಗೆ ದ್ರೋಹ ಮಾಡುತ್ತಿದ್ದೇವೆ. ಪರಿಷತ್ ನಡೆಸುವ ಕನ್ನಡ ಪರೀಕ್ಷೆಗಳನ್ನು ಎಲ್ಲ ವಿದ್ಯಾರ್ಥಿಗಳು ಬರೆಯುವಂತಾಗಬೇಕು. ಕನ್ನಡ ಕಾವ್ಯ, ಪ್ರಬಂಧ, ಕತೆ ರಚನಾ ಕಮ್ಮಟಗಳು ನಡೆಸಬೇಕು. ಇದು ನಮ್ಮ ಓದು ಮರೆತ ಗೆಳೆಯರನ್ನು ಓದುವ ಹಾದಿಗೆ ತರುವಲ್ಲಿ ನೆರವಾಗುತ್ತದೆ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಿ.ಎಸ್.ಶ್ರೀಧರ, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಗಣೇಶಮೂರ್ತಿ, ಸಾಹಿತಿ ಪ್ರೊ. ಕೃಷ್ಣೇಗೌಡ, ತಹಸೀಲ್ದಾರ್ ಭರತ್ ರಾಜ್, ಕರ್ನಾಟಕ ಜಾನಪದ ಪರಿಷತ್ ಹೊಸನಗರ ಅಧ್ಯಕ್ಷ ಎಂ.ಎಂ.ಪರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ವಿಜೇಂದ್ರ ಶೇಟ್, ಕೆ.ಜಿ.ನಾಗೇಶ್, ತ.ಮ.ನರಸಿಂಹ, ಅಶ್ವಿನಿ ಪಂಡಿತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net