ಪ್ರಮುಖ ಬೀದಿಗಳನ್ನು ಆಕರ್ಷಕವಾಗಿಸಲು ತೀರ್ಮಾನ I main streers attractive

ಸುಂದರೇಶ್, ಸೂಡಾ ಅಧ್ಯಕ್ಷ
ಸುಂದರೇಶ್, ಸೂಡಾ ಅಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ಹಸಿರೀಕರಣ ಹಾಗೂ ಭದ್ರತೆಗೂ ಒತ್ತು
  • ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾಹಿತಿ
ಶಿವಮೊಗ್ಗ: ಸೂಡಾ (ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯ ಪ್ರಮುಖ ಬೀದಿಗಳು, (streets)ವೃತ್ತಗಳನ್ನು ಆಕರ್ಷಕ (atractive) ಗೊಳಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಹಸಿರೀಕರಣ ಹಾಗೂ ಭದ್ರತೆಗೂ ಒತ್ತು ನೀಡಲಾಗುವುದು. ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಒಂದು ಸುತ್ತಿನ ಸಭೆ (meeting) ನಡೆಸಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಮುಂಬರುವ 30-40 ವರ್ಷಗಳಲ್ಲಿ ಶಿವಮೊಗ್ಗ-ಭದ್ರಾವತಿ ನಗರಗಳಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ, ಜನಸಂಖ್ಯೆ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಪರಿಣಿತರಿಂದ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂಬಂಧ ಈಗಾಗಲೇ ಸಭೆ ನಡೆಸಿದ್ದು ಅದರಲ್ಲಿ ನಗರಪಾಲಿಕೆ, ಕೃಷಿ, ಕಂದಾಯ, ಅರಣ್ಯ ಇಲಾಖೆ ಜಿಲ್ಲಾ ಮಟ್ದದ ಅಧಿಕಾರಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿ ಸಲಹೆ, ಅಭಿಪ್ರಾಯ ಪಡೆಯಲಾಗಿದೆ ಎಂದರು.
ಆಯ್ದ ಕೆಲವು ಉದ್ಯಾನವನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸೂಡಾದಿಂದ ಕಾರ್ಯಯೋಜನೆ ರೂಪಿಸಲಾಗಿದೆ. ಪಾರ್ಕ್‌ಗಳ ನಿರ್ವಹಣೆಗೆ ಹಲವು ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರಮುಖರು ಆಸಕ್ತಿ ತೋರಿದ್ದಾರೆ. ಸೂಡಾ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆಂದು ಒಂದು ಕೋಟಿ ರೂ. ಅನುದಾನವನ್ನು ಅರಣ್ಯ ಇಲಾಖೆಗೆ ನೀಡಲಾಗುವುದು ಎಂದರು.
ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಲು ಒಡಂಬಡಿಕೆ ಮಾಡಿಕೊಳ್ಳಲಿದೆ. ಈ ಒಡಂಬಡಿಕೆ ಅನ್ವಯ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟು ಪೋಷಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ ಎಂದು ತಿಳಿಸಿದರು.
ಸೂಡಾ ಆಯುಕ್ತ ಬಿ.ಆರ್.ಮಂಜುನಾಥ್, ನಾಮನಿರ್ದೇಶಿತ ಸದಸ್ಯ ಪ್ರವೀಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.


ಕೆರೆಗಳ ಅಭಿವೃದ್ಧಿ

ನಗರ ವ್ಯಾಪ್ತಿಯ ಹಲವು ಕೆರೆಗಳ ಅಭಿವೃದ್ಧಿಗೆ ಪ್ರಾಧಿಕಾರ ಒತ್ತು ನೀಡಿದೆ. ಕಂದಾಯ ಇಲಾಖೆ, ನಗರಪಾಲಿಕೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಕೆರೆಗಳ ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದ ಬಳಿಕ ರಕ್ಷಣಾ ಬೇಲಿ ನಿರ್ಮಿಸಿ ಕೆರೆಗಳ ನವ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ 15 ಕೆರೆಗಳನ್ನು ಗುರುತಿಸಿದ್ದು ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸುಂದರೇಶ್ ಹೇಳಿದರು.

ಸ್ಕೈವಾಕ್-ಎಸ್ಕಲೇಟರ್

ಶಿವಮೊಗ್ಗದ ಕೆಲವು ಪ್ರಮುಖ ವೃತ್ತಗಳಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ವಿಪರೀತವಾಗಿದೆ. ಇದರಿಂದ ಪಾದಚಾರಿಗಳಿಗೆ ಕಷ್ಟವಾಗಿದೆ. ಹೀಗಾಗಿ ಪ್ರಮುಖ ವರ್ತುಲಗಳಲ್ಲಿ ಸ್ಕೈವಾಕ್, ಎಸ್ಕಲೇಟರ್‌ಗಳ ಅಳವಡಿಕೆಗೆ ಚಿಂತನೆ ನಡೆದಿದೆ. ತಾಂತ್ರಿಕ ಪರಿಣತರಿಂದ ಸಲಗೆ ಪಡೆದು ಇದನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಸೂಡಾದಿಂದ 15 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಸುಂದರೇಶ್ ತಿಳಿಸಿದರು. ಪ್ರಮುಖ ವೃತ್ತಗಳಲ್ಲಿ ದೇಶದ ಗಣ್ಯರ ಪುತ್ಥಳಿಗಳನ್ನು ನಿರ್ಮಿಸಿ ಸುತ್ತಲೂ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಚಿಂತನೆ ನಡೆಸಿದ್ದು ಅದಕ್ಕಾಗಿ 8 ಕೋಟಿ ರೂ. ಕಾಯ್ದಿರಿಸಲಾಗಿದೆ. ಅವಳಿ ನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆ ಮತ್ತು ಸ್ವಚ್ಛತೆಗೂ ವಿಶೇಷ ಗಮನಹರಿಸಲಾಗಿದೆ. ಇದಕ್ಕಾಗಿ ಅಗತ್ಯ ಯಂತ್ರೋಪಕರಣಗಳನ್ನು ಸೂಡಾದಿಂದ ಖರೀದಿಸಿ, ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದರು.

ನಿವೇಶನ ಹಂಚಿಕೆಗೆ ಕ್ರಮ

ಸೂಡಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಜಿ+7 ಮಾದರಿಯಲ್ಲಿ 1,200 ಮನೆಗಳ ವಸತಿ ಸಮುಚ್ಛಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆಯ ನಂತರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಗೋಪಶೆಟ್ಟಿಕೊಪ್ಪದಲ್ಲಿ 104 ಎಕರೆ ಭೂಮಿಯನ್ನು ಸೂಡಾಕ್ಕೆ ಹಸ್ತಾಂತರಿಸಲು ರೈತರು ಆಸಕ್ತಿ ತೋರಿದ್ದರು.ಅದರಲ್ಲಿ 32 ಎಕರೆ ಜಮೀನಿನ ಮಾಲೀಕರು ಶೇ. 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದಾರೆ. ಕೆಲವೇ ತಿಂಗಳಿನಲ್ಲಿ ಬಡಾವಣೆ ನಿರ್ಮಾಣ ಕಾರ್ಯ ಆರಂಭಗೊಳ್ಳುವ ಆಶಯವಿದೆ.
"

ಅಪಘಾತಗಳು, ಅಹಿತಕರ ಘಟನೆಗಳು, ಕೊಲೆ ಮುಂತಾದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಪ್ರಮುಖ ವೃತ್ತಗಳು, ಜನನಿಬಿಡ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಕ್ತ ಸ್ಥಳ ಗುರುತಿಸುವಂತೆ ಪೊಲೀಸ್ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಇದಕ್ಕಾಗಿ ಐದು ಕೋಟಿ ರೂ. ಮೀಸಲಿರಿಸಲಾಗಿದೆ.

— ಎಚ್.ಎಸ್.ಸುಂದರೇಶ್ ಸೂಡಾ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net