ಹೊಳೆಹೊನ್ನೂರು: ಎಲ್ಲ ವರ್ಗದವರಿಗೂ ಸಂಘಟನೆಗಳಿವೆ. ಹಾಗಾಗಿ ರೈತರಿಗೂ ರೈತ ಸಂಘ ಅತ್ಯವಶ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಸಮೀಪದ ಇಟ್ಟಿಗೆಹಳ್ಳಿ ಕ್ಯಾಂಪ್‌ನಲ್ಲಿ ರೈತ ಸಂಘದ ಗ್ರಾಮ ಘಟಕದ ಫಲಕ ಅನಾವರಣ ಮಾಡಿ ಮಾತನಾಡಿದ ಅವರು, ರೈತ ಸಂಘ ಇರುವುದರಿಂದ ರೈತರ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ. ರೈತರ ಹಕ್ಕುಗಳನ್ನ ಸರ್ಕಾರದ ವಿರುದ್ಧ ಹೋರಾಡಿ ಪಡೆದುಕೊಳ್ಳುತ್ತಿದ್ದೇವೆ ಎಂದರು.
ಉದಾರೀಕರಣ, ಖಾಸಗೀಕರಣದಿಂದಾಗಿ ಪ್ರಪಂಚದ ಜತೆ ಸ್ಪರ್ಧೆ ಮಾಡಬೇಕಿದೆ. ಅಮೆರಿಕ ಹೆಚ್ಚು ಸುಂಕವನ್ನು ವಿಧಿಸುತ್ತಿದೆ. ಜತೆಗೆ ಮುಕ್ತ ವಾಣಿಜ್ಯ ಒಪ್ಪಂದದಿಂದ ಸುಂಕವಿಲ್ಲದೆ ಭಾರತಕ್ಕೆ ಆಮದು ಹೆಚ್ಚಾಗುತ್ತದೆ. ಇದು ರೈತರಿಗೆ ಸಾಕಷ್ಟು ಸ್ಪರ್ಧೆ ತಂದೊಡ್ಡಲಿದೆ. ಈ ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಅಡಿಕೆ ತೋಟಗಳಿಗೆ ಭಾರಿ ಹಾನಿ ಉಂಟಾಗಿದೆ. ಮಾರ್ಗಸೂಚಿಯ ಪರಿಹಾರವನ್ನು ಹೆಚ್ಚಿಸಿ ಎಕರೆಗೆ ಕನಿಷ್ಠ 50 ಸಾವಿರ ರೂ. ನೀಡಬೇಕು. ಮನೆ ಕಳೆದುಕೊಂಡವರಿಗೆ ಕನಿಷ್ಠ 5 ಲಕ್ಷ ರೂ. ನೀಡಬೇಕು ರೈತರ ಸಾಲ ಮನ್ನಾ ಮಾಡಿ, ಬಡ್ಡಿ ರಹಿತವಾಗಿ ಹೊಸ ಸಾಲ ಸೌಲಭ್ಯ ನೀಡಬೇಕು. ಬೆಳೆ ವಿಮೆ ಪರಿಹಾರ ಹಣ ತಕ್ಷಣ ಬಿಡುಗಡೆ ಮಾಡಬೇಕು. ಸರ್ಕಾರಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಮಹಿಳಾ ಸಂಚಾಲಕಿ ಭಾಗ್ಯಾ ರಾಘವೇಂದ್ರ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ನಾಗರಾಜ್, ಪಿ.ದಾನೇಶಪ್ಪ, ಈಶ್ವರಪ್ಪ, ರುದ್ರೇಶಪ್ಪ, ಜಿ.ಎನ್ ಪಂಚಾಕ್ಷರಿ, ಸಿ.ಬಿ.ಹನುಮಂತಪ್ಪ, ಸಿ.ಚಂದ್ರಪ್ಪ ಇತರರಿದ್ದರು.