ಹೊಸನಗರ: ಸಮಾಜವನ್ನು ಒಗ್ಗೂಡಿಸಲು ಸಂಘಟನೆಗಳಿಂದ ಮಾತ್ರ ಸಾಧ್ಯ. ಸಮಾಜ ಒಗ್ಗೂಡುವುದರ ಜತೆಗೆ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ತಿಳಿಸಿದರು.
ಹೊಸನಗರ ತಾಲೂಕು ಒಕ್ಕಲಿಗ ಸಭಾಭವನಕ್ಕೆ ಭೇಟಿ ನೀಡಿ ಒಕ್ಕಲಿಗ ಸಂಘದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಆಶೀರ್ವದಿಸಿ ಮಾತನಾಡಿದ ಅವರು, ನಮ್ಮವರೇ ನಮ್ಮ ಏಳಿಗೆಯನ್ನು ಸಹಿಸದೆ ಅಸಹಕಾರ ತೋರಿದಾಗ ನಮ್ಮಲ್ಲಿ ಒಗ್ಗಟ್ಟು ಎಂದಿಗೂ ಸಾಧ್ಯವಿಲ್ಲ. ಎಲ್ಲಿ ಒಗ್ಗಟ್ಟು ಎಂಬುದು ಸಾಧ್ಯವಿಲ್ಲವೋ ಅಲ್ಲಿ ಅಭಿವೃದ್ಧಿಯೂ ಶೂನ್ಯವಾಗಿರುತ್ತದೆ ಎಂದರು.
ಪರಮಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಮಾಜ ಗಟ್ಟಿಯಾಗಿ ನಿಂತಿದೆ. ಮಠದ ಮಾರ್ಗದರ್ಶನದಲ್ಲಿ ನೀವೆಲ್ಲರೂ ಕ್ರಿಯಾಶೀಲರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು. ಈ ಭಾಗದ ವಿದ್ಯಾರ್ಥಿಗಳು ಸಹ ನಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯಬೇಕು. ಸಮಾಜದವರು ಸಮಾಜಮುಖಿ ಕೆಲಸಗಳ ಜತೆಗೆ ನಿರಂತರವಾಗಿ ಮಠದ ಸಂಪರ್ಕದಲ್ಲಿ ಇರಬೇಕು ಎಂದರು.
ಮುಂದಿನ ದಿನಗಳಲ್ಲಿ ಸಂಘದ ಮೂಲಕ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಸಮುದಾಯಕ್ಕೆ ಮಠಗಳ ಮತ್ತು ಸ್ವಾಮೀಜಿಗಳ ಅವಶ್ಯಕತೆ ಏನು, ಸಮುದಾಯ ಯಾವ ಹಂತದಲ್ಲಿದೆ, ಸಮುದಾಯದ ಬೆಳವಣಿಗೆಗೆ ಸಮಾಜದವರು ಏನು ಮಾಡಬೇಕು, ಸಮುದಾಯಕ್ಕೆ ಮೂಲ ಸೌಕರ್ಯ ಹೇಗೆ ಕಲ್ಪಿಸಬೇಕು ಎಂಬುದನ್ನು ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಹಾಲಗದ್ದೆ ಉಮೇಶ್, ಉಪಾಧ್ಯಕ್ಷ ಜಯಶೀಲಪ್ಪ ಗೌಡ, ಕಾರ್ಯದರ್ಶಿ ರತ್ನಾಕರ್ ಕುಂಟಿಗೆ, ನಿರ್ದೇಶಕರಾದ ದಿನೇಶ್, ಪೂರ್ಣೇಶ್ ಮಲೆಬೈಲ್, ವೆಂಕಟೇಶ್ ಹೆಗಡೆ, ಎ.ಸಿ.ಪ್ರಕಾಶ್, ಕೃಷ್ಣಮೂರ್ತಿ ಇತರರಿದ್ದರು.