ಸಾಗರ: ಭಾಷೆ ಜೀವಂತವಾಗಿ ಇರಬೇಕಾದರೆ ಸಂವಹನ ಮುಖ್ಯ. ಕನ್ನಡ ಭಾಷೆ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಸಾಗರ ನಗರಸಭೆ ರಂಗಮಂದಿರದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ನಾಡು-ನುಡಿ ಸಂಭ್ರಮ ಸಮಾರೋಪದಲ್ಲಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ನಾಡಿನಲ್ಲಿ ಕನ್ನಡ ಭಾಷೆ ಪರಿಪೂರ್ಣವಾಗಿ ವ್ಯಾಪಿಸಿಲ್ಲ. ಆಡಳಿತ ಭಾಷೆಯಾಗಿ, ನ್ಯಾಯಾಲಯದಲ್ಲಿ ಕನ್ನಡ ಭಾಷೆ ಸಂಪೂರ್ಣ ಜಾರಿಗೆ ಬರಬೇಕು. ನಮ್ಮ ಭಾಷೆ ಮೇಲೆ ಅಭಿಮಾನ ಇರಬೇಕು. ಕನ್ನಡ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಸೃಜನಾತ್ಮಕವಾಗಿ ಬಳಸಲು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್ ಮಾತನಾಡಿ, ಭಾಷಾ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜತೆ ಕನ್ನಡಪರ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ. ನಾಡು-ನುಡಿ ಸಂಭ್ರಮದ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಉತ್ತಮ ಸಂಗತಿ ಎಂದರು.
ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಸತ್ಯನಾರಾಯಣ ಸದಾನಂದ ಶರ್ಮ, ಜಿ.ನಾಗೇಶ್, ಪ್ರಕಾಶ್, ಡಾ. ಶ್ರೀಪಾದ, ಶಿವಶಂಕರ್, ಗಿರೀಶ್ ರಾಯ್ಕರ್, ಶಿವಯೋಗಿ, ನಾರಾಯಣಮೂರ್ತಿ ಕಾನುಗೋಡು ಇತರರಿದ್ದರು. ವಿವಿಧ ತಂಡಗಳಿಂದ ಸಾಂಸ್ಕೃತಿಕ ವೈಭವ ಹಾಗೂ ಕವನ ವಾಚನ ನಡೆಯಿತು.