ಕೊಂಜವಳ್ಳಿ-ಕಡಕೋಡು ಸೇತುವೆ ಇಕ್ಕೆಲಗಳಲ್ಲಿ ಕುಸಿತ

ತುಮರಿ ಸಮೀಪ ಕೊಂಜವಳ್ಳಿಯಿಂದ ಕಡಕೋಡು ಸಂಪರ್ಕಿಸುವ ಹೊಸ ಸೇತುವೆಯ ಎರಡು ಬದಿಯಲ್ಲಿ ಕಲ್ಲಿನ ಪಿಚ್ಚಿಂಗ್ ಮಣ್ಣು ಸಮೇತ ಕುಸಿದಿರುವುದು.
ತುಮರಿ ಸಮೀಪ ಕೊಂಜವಳ್ಳಿಯಿಂದ ಕಡಕೋಡು ಸಂಪರ್ಕಿಸುವ ಹೊಸ ಸೇತುವೆಯ ಎರಡು ಬದಿಯಲ್ಲಿ ಕಲ್ಲಿನ ಪಿಚ್ಚಿಂಗ್ ಮಣ್ಣು ಸಮೇತ ಕುಸಿದಿರುವುದು.
Published on
ತುಮರಿ: ಸಮೀಪದ ಭಾನ್ಕುಳಿ ಗ್ರಾಪಂ ವ್ಯಾಪ್ತಿ ಕೊಂಜವಳ್ಳಿಯಿಂದ ಕಡಕೋಡು ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಿದ್ದ ಹೊಸ ಸೇತುವೆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಸಾಧಾರಣ ಮಳೆಗೆ ಕುಸಿದಿದೆ.
30 ಲಕ್ಷ ರೂ. ಅನುದಾನದಲ್ಲಿ ಇತ್ತೀಚೆಗೆ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆಗೆ ಕಲ್ಲಿನ ಪಿಚ್ಚಿಂಗ್ ಮಣ್ಣು ಸಮೇತ ಒಂದೂವರೆ ಅಡಿಯಷ್ಟು ಕುಸಿದಿದೆ.
ಹೊಸ ಸೇತುವೆಯು ಗುಡುಬಲು, ದಬ್ಬೆ ಫಾಲ್ಸ್, ಚಪ್ಪರಮನೆ, ಕಲಗಲಿ ಹಾಗೂ ಕಾನೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದೆ. ಪ್ರತಿನಿತ್ಯ ನೂರಾರು ಜನರು, ಶಾಲಾ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಪೂರ್ತಿ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಇದರಿಂದ ಎಲ್ಲ ಕುಟುಂಬಗಳು ಸಂಪರ್ಕ ಕಳೆದುಕೊಳ್ಳಲಿದೆ.
ಕಾಮಗಾರಿ ವೇಳೆ ಸೂಕ್ತ ಮಣ್ಣನ್ನು ಬಳಸದಿರುವುದೇ ದುರವಸ್ಥೆಗೆ ಕಾರಣ ಎನ್ನಲಾಗಿದೆ. ಕೆಸರು ಮಣ್ಣು ಬಳಸಿದ್ದರಿಂದ ಇಡೀ ರಸ್ತೆಯು ಈಗ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಗುಣಮಟ್ಟದ ಕೆಲಸ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ತರಾತುರಿಯಲ್ಲಿ ಕಳಪೆ ಕಾಮಗಾರಿ ನಡೆಸಿದ್ದಾರೆ. ಗ್ರಾಮಸ್ಥರು ಸಂಪರ್ಕ ಮಾರ್ಗ ಕಳೆದುಕೊಳ್ಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net