ಸಿಜೆಪಿ ವಿದ್ಯಾರ್ಥಿಗಳ ಪರ ಚಳವಳಿ ಆಗಿರಲಿಲ್ಲ | K.S.Eshwarappa

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ದೇಶ-ವಿದೇಶಗಳಿಂದ ಜನರು ಬಂದಿದ್ದರು
  • ಕಾಂಗ್ರೆಸ್ ಪ್ರತಿಪಕ್ಷವಾಗಿ ಹೋರಾಟಗಾರರ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದು ಸರಿಯಲ್ಲ
  • ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ
ಶಿವಮೊಗ್ಗ: ಕಾಕ್ರೋಚ್ ಜನತಾ ಪಕ್ಷ(Cockroach Janata Party)(ಸಿಜೆಪಿ)ದ ಕಾರ್ಯಕರ್ತರು ಜಂತರ್‌ಮಂತರ್‌(Janthar Mantar)ನಲ್ಲಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ ಪರ ಚಳವಳಿ ಆಗಿರಲಿಲ್ಲ. ಅದೊಂದು ಧಂಗೆಯಾಗಿತ್ತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ದೇಶ-ವಿದೇಶಗಳಿಂದ ಜನರು ಬಂದಿದ್ದರು. ಹಣವೂ ಬಂದಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಸಿಜೆಪಿ ಹೋರಾಟ(CJP struggle)ಕ್ಕೆ ಕಾಂಗ್ರೆಸ್ ಪ್ರತಿಪಕ್ಷವಾಗಿ ನೀಟ್ ಚಳುವಳಿಗೆ ಬೆಂಬಲ ನೀಡಿದ್ದು ತಪ್ಪಲ್ಲ, ಆದರೆ ಹೋರಾಟಗಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದು ಮಾತ್ರ ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇದು ಹಿಂದೂಸ್ತಾನ(Hindustan), ಭಾರತ ಧರ್ಮಭೂಮಿ. ಸಂವಿಧಾನಕ್ಕೆ ಗೌರವ ಕೊಡುವ ಭೂಮಿ ನಮ್ಮದು. ಇಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ. ಇದು ನೇಪಾಳ ಅಥವಾ ಶ್ರೀಲಂಕಾವಲ್ಲ. ಜಂತರ್‌ಮಂತರಲ್ಲಿ ಭಾರತ ಮಾತೆಯ ಬಗ್ಗೆಯೇ ಟೀಕೆ ಮಾಡಿದ್ದಾರೆ. ಧರ್ಮದ್ರೋಹಿಗಳು, ದೇಶದ್ರೋಹಿಗಳು ಏನೇ ಹುನ್ನಾರ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಈಗಾಗಲೇ ತನಿಖೆಗೆ ಆದೇಶಿಸಿದ್ದು ವರದಿ ಬಂದ ನಂತರ ವಾಸ್ತವಾಂಶ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
ಧರ್ಮೇಂದ್ರ ಪ್ರಧಾನ್(Dharmendra Pradhan) ನಿಷ್ಠಾವಂತ, ಪ್ರಾಮಾಣಿಕರಾಗಿದ್ದು ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ನೀಟ್ ಪರೀಕ್ಷಾ ವಿವಾದದ ಆರೋಪ ಅವರ ಮೇಲೆ ಬಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಈ ಪ್ರಾಮಾಣಿಕ ವ್ಯಕ್ತಿಯ ಸೇವೆ ದೇಶಕ್ಕೆ ಬೇಕಿದೆ. ಈ ರೀತಿಯ ಶಿಕ್ಷೆ ಅವರಿಗೆ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದ ಈಶ್ವರಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಸಾಕಷ್ಟು ಸುಧಾರಣೆ ತಂದಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಿದ್ದ ಅವಧಿಯಲ್ಲಿ ಪ್ರಧಾನ್ ಅವರು ರಾಜ್ಯದ ಉಸ್ತುವಾರಿಯಾಗಿದ್ದರು. ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ, ಪಕ್ಷದ ಸಂಘಟನೆಗೆ ಸಹಕರಿಸಿದ್ದರು. ಈಗ ರಾಜೀನಾಮೆ ಸಲ್ಲಿಸಿದರೂ ಅವರು ಪಕ್ಷದ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಹೋಗಲಿದ್ದಾರೆ ಎಂದು ಆಶೀಸಿದರು.
ಸಿದ್ದು ಚುನಾವಣಾ ನಿವೃತ್ತಿ ಘೋಷಣೆಗೆ ಟೀಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former Chief Minister Siddaramaiah) ತಾವು ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಈ ರೀತಿ ಬಹಳ ಬಾರಿ ಹೇಳಿದ್ದಾರೆ. ಅವರ ಪುತ್ರ, ಹಾಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯೇ ಐದು ವರ್ಷ ಮುಖ್ಯಮಂತ್ರಯಾಗಿರುತ್ತಾರೆ. 2028ರ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಮುಂದೆಯೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದಿದ್ದರು. ಹಾಗಾಗಿ ಸಿದ್ದರಾಮಯ್ಯ ಹೇಳಿಕೆಯು ನಂಬಲು ಅರ್ಹವಲ್ಲ ಎಂದು ಟೀಕಿಸಿದರು. 
ಮೊದಲು ಬರ ಅಧ್ಯಯನ ನಡೆಸಲಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ಅವರು ದೆಹಲಿಗೆ ತೆರಳಿ ರಾಜ್ಯದ ಸಂಸದರ ಜತೆ ಬರದ ಬಗ್ಗೆ ಸಭೆ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ಅನಾವೃಷ್ಟಿಯಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಸರ್ವೇ ಕೈಗೊಳ್ಳದೆ ಯಾವ ಅಂಕಿಅಂಶವೂ ಇಲ್ಲದೆ ಸಂಸದರ ಜತೆ ಸಭೆ ನಡೆಸಿದರೂ ಪ್ರಯೋಜನವಿಲ್ಲ. ಮೊದಲು ರಾಜ್ಯದಲ್ಲಿ ಬರ ಅಧ್ಯಯನ ನಡೆಸಬೇಕು. ಆದರೆ ರಾಜ್ಯದಲ್ಲಿ ಸವೇ ಮಾರ್ಡುವ ಅಧಿಕಾರಿಗಳೆಲ್ಲಾ ಎಸ್‌ಐಆರ್(ವಿಶೇಷ ಸಮಗ್ರ ಪರಿಷ್ಕರಣೆ)ನಲ್ಲಿ ತೊಡಗಿಕೊಂಡಿದ್ದಾರೆ. ಏನೇ ಆರ್ಥಿಕ ಸಂಕಷ್ಟ ಎದುರಾದರೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ ಎಂದು ಈಶ್ವರಪ್ಪ ಕಿಡಿಕಾರಿದರು.
 
"

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಮಂತ್ರಿಮಂಡಲ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಲ್ಲ. ಸಿಎಂ ಉನ್ನತಾಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಮಾತ್ರ ನೀಡುತ್ತಿದ್ದಾರೆ. ಬರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಎಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಕ್ಕೆ ಮಾತ್ರ ಇದ್ದಾರಾ ?, 136 ಶಾಸಕರನ್ನು ಹೊಂದಿದ್ದರೂ ಇದೊಂದು ಬೇಜವಾಬ್ದಾರಿ ಸರ್ಕಾರವಾಗಿದೆ.

— ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net