ಚನ್ನಗಿರಿಯಿಂದ ಬಾಳೆಹೊನ್ನೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಕಲ್ಲಿಹಾಳ್‌ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕೇದಾರಲಿಂಗ ಶಿವಶಾಂತವೀರ ಶ್ರೀ, ಹಾಲೇಶ್, ಜಯಣ್ಣ, ರಾಜಪ್ಪ ಸಾರ್ಥಿ, ಸೋಮಶೇಖರಯ್ಯ ಇತರರಿದ್ದರು.
Published on:
Copied
Follow Us
ಹೊಳೆಹೊನ್ನೂರು: ಲೋಕಕಲ್ಯಾಣಾರ್ಥ ಚನ್ನಗಿರಿಯಿಂದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದವರೆಗೆ ನ.23ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚನ್ನಗಿರಿಯ ಕೇದಾರ ಶಾಖಾ ಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನ.27ರಂದು ಹಮ್ಮಿಕೊಂಡಿರುವ ಪಂಚಾಚಾರ್ಯರ ಅಡ್ಡಪಲ್ಲಕಿ ಉತ್ಸವ ಹಾಗೂ ಮೈಸೂರು ರಾಜಮನೆತನದವರಿಗೆ ಸನ್ಮಾನ ಕಾರ್ಯಕ್ರಮದ ಪ್ರಯುಕ್ತ ಕಲ್ಲಿಹಾಳ್‌ನ ಶನೈಶ್ಚರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾಜ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಇಷ್ಟಲಿಂಗ ಪೂಜೆ ಸೇರಿ ಪೂಜಾ ಕೈಂಕರ್ಯಗಳ ಮಹತ್ವವನ್ನು ಕಿರಿಯರಿಗೆ ಮನವರಿಕೆ ಮಾಡಬೇಕಿದೆ. ಸಮಾಜದ ಕಾರ್ಯಕ್ರಮಗಳಲ್ಲಿ ಯುವಶಕ್ತಿ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ದುಶ್ಚಟಗಳಿಗೆ ಬಲಿಯಾಗಿ ಹಾದಿತಪ್ಪದಂತೆ ನೋಡಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುವುದನ್ನು ಮರೆಯಬಾರದು. ಯುವಜನರು ಸಂಕಲ್ಪ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರೆ ಕಾರ್ಯ ಸಾಧನೆಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
23ರಂದು ಬೆಳಗ್ಗೆ ಚನ್ನಗಿರಿಯ ಕೇದಾರ ಶಾಖಾ ಪೀಠದಿಂದ ಆರಂಭವಾಗುವ ಪಾದಯಾತ್ರೆ ಶಿವಮೊಗ್ಗ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಭದ್ರಾವತಿ ತಾಲೂಕಿನ ಯಡೇಹಳ್ಳಿ, ಅರಹತೊಳಲು ಮಾರ್ಗವಾಗಿ ಹೊಳೆಹೊನ್ನೂರು ತಲುಪುತ್ತದೆ. ಹೊಳೆಹೊನ್ನೂರು, ಉಂಬ್ಳೆಬೈಲು, ಎನ್.ಆರ್.ಪುರದಲ್ಲಿ ಶ್ರೀಗಳು ಹಾಗೂ ಪಾದಯಾತ್ರಿಗಳ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಶಿಕಾರಿಪುರದ ಕಡೇನಂದಿಹಳ್ಳಿ ಮತ್ತು ಹಾರ‌್ನಳ್ಳಿ ಶ್ರೀಗಳು ಜೊತೆಯಾಗಲಿದ್ದಾರೆ ಎಂದು ತಿಳಿಸಿದರು.