ಶೂನ್ಯ ತ್ಯಾಜ್ಯ ಗಣೇಶೋತ್ಸವ ಆಚರಿಸಿ | workShop

ಶಿಕಾರಿಪುರದಲ್ಲಿ ಗಣೇಶೋತ್ಸವ ಸಮಿತಿಗಳಿಗೆ ಆಯೋಜಿಸಿದ್ದ ಸ್ವಚ್ಛತಾ ತರಬೇತಿ ಕಾರ್ಯಾಗಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಭರತ್ ಮಾತನಾಡಿದರು, ಸಂಪತ್, ರಾಜ್‌ಕುಮಾರ್ ಇದ್ದರು.
ಶಿಕಾರಿಪುರದಲ್ಲಿ ಗಣೇಶೋತ್ಸವ ಸಮಿತಿಗಳಿಗೆ ಆಯೋಜಿಸಿದ್ದ ಸ್ವಚ್ಛತಾ ತರಬೇತಿ ಕಾರ್ಯಾಗಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಭರತ್ ಮಾತನಾಡಿದರು, ಸಂಪತ್, ರಾಜ್‌ಕುಮಾರ್ ಇದ್ದರು.
Published on
ಶಿಕಾರಿಪುರ: ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಹಬ್ಬದ ಸಂದರ್ಭದಲ್ಲಿ ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡುವ ಜತೆಗೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭರತ್ ತಿಳಿಸಿದರು.
ಪಟ್ಟಣದಲ್ಲಿ ಈ ಬಾರಿ ಕಸಮುಕ್ತ ಹಾಗೂ ಶೂನ್ಯ ತ್ಯಾಜ್ಯ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳ ಯುವಕರಿಗೆ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕಬಾರದು. ಪೆಂಡಾಲ್‌ಗಳಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಸಂಗ್ರಹಿಸಬೇಕು. ಪುರಸಭೆಯಿಂದ ನೀಡಿರುವ ಮೂರು ಪ್ರತ್ಯೇಕ ತ್ಯಾಜ್ಯ ಸಂಗ್ರಹಣಾ ಚೀಲಗಳನ್ನು ಬಳಸಬೇಕು. ಶೂನ್ಯ ತ್ಯಾಜ್ಯ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಿ ಪುರಸಭೆಯೊಂದಿಗೆ ಸಹಕರಿಸುವ ಎರಡು ಅತ್ಯುತ್ತಮ ಸಮಿತಿಗಳಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು
ಪರಿಸರ ತಜ್ಞ ಸಿ.ಎಂ.ಸಂಪತ್ ಮಾತನಾಡಿ, ಘನ ಮತ್ತು ಹಸಿ ತ್ಯಾಜ್ಯ ನಿರ್ವಹಣಾ ನಿಯಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ಹಸಿ ಕಸ ವೈಜ್ಞಾನಿಕ ನಿರ್ವಹಣೆ, ಒಣ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವ ಕುರಿತು ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಸ್ಪಷ್ಟವಾದ ಮಾರ್ಗದರ್ಶನ ನೀಡಿದರು.
ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ನಿಯಂತ್ರಿಸಿ, ಪರಿಸರ ಸ್ನೇಹಿ ಹಾಗೂ ಹಸಿರು ಹಬ್ಬವಾಗಿ ಗಣೇಶೋತ್ಸವವನ್ನು ಆಚರಿಸಲಾಗುವುದು. ವಿಸರ್ಜನೆ ಸಂದರ್ಭ ಸ್ವಚ್ಛತೆ ಕಡೆಗೆ ಗಮನಹರಿಸಲಾಗುವುದು ಎಂದು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಒಮ್ಮತ ವ್ಯಕ್ತಪಡಿಸಿದರು.
ಪುರಸಭೆಯ ಮೇಲ್ವಿಚಾರಕ ರಾಜ್‌ಕುಮಾರ್, ಸೈಯದ್ ನವಾಜ್, ಸಮುದಾಯ ಸಂವಹನಕಾರರು, ಸ್ವಚ್ಛತಾ ಕಾರ್ಮಿಕರು, ಮೇಲ್ವಿಚಾರಕರು ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net