ಧರ್ಮ ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಿ

ಎಮ್ಮೆಹಟ್ಟಿಯಲ್ಲಿ ಆಯೋಜಿಸಿದ್ದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಗೃಹ ಪ್ರವೇಶದ ಧರ್ಮಸಭೆಯಲ್ಲಿ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾರದಾ ಪೂರ‌್ಯಾನಾಯ್ಕಾ, ಮರಿಯೋಜಿ ರಾವ್, ಸಚಿನ್ ಸಿಂಧ್ಯಾ ಇತರರಿದ್ದರು.
ಎಮ್ಮೆಹಟ್ಟಿಯಲ್ಲಿ ಆಯೋಜಿಸಿದ್ದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಗೃಹ ಪ್ರವೇಶದ ಧರ್ಮಸಭೆಯಲ್ಲಿ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾರದಾ ಪೂರ‌್ಯಾನಾಯ್ಕಾ, ಮರಿಯೋಜಿ ರಾವ್, ಸಚಿನ್ ಸಿಂಧ್ಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಅಭಿಮತ
  • ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಪ್ರವೇಶೋತ್ಸವ
  • ಮಂದಿರಗಳ ನಿರ್ಮಾಣದಿಂದ ಸಮಾಜಗಳ ಒಗ್ಗೂಡುವಿಕೆ ಸಾಧ್ಯ
ಹೊಳೆಹೊನ್ನೂರು: ಛತ್ರಪತಿ ಶಿವಾಜಿ ಮಹಾರಾಜರು ಒಂದು ಸಮಾಜಕ್ಕೆ ಸೀಮಿತವಾಗದೆ ವಿಶ್ವನಾಯಕನಾಗಿದ್ದಾರೆ ಎಂದು ಗೋಸಾಯಿ ಸಂಸ್ಥಾನ ಭವಾನಿ ಪೀಠದ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.
ಸಮೀಪದ ಎಮ್ಮೆಹಟ್ಟಿಯಲ್ಲಿ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಪ್ರವೇಶೋತ್ಸವ, ಮರುಳಸಿದ್ದೇಶ್ವರ ಸ್ವಾಮಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಪ್ರಯುಕ್ತ ಆಯೋಜಿಸಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಂದಿರಗಳು ಬೌದ್ಧಿಕ ವಿಕಾಸ ವೃದ್ಧಿಸುವ ಜತೆ ಸಮಾಜಗಳನ್ನು ಒಗ್ಗೂಡಿಸುತ್ತವೆ. ಧರ್ಮ ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಬೇಕು. ಧಾರ್ಮಿಕ ಕೆಲಸಕ್ಕೆ ಕೈಜೋಡಿಸುವವರನ್ನು ಭಗವಂತ ಆಶೀರ್ವದಿಸುತ್ತಾನೆ. ಸ್ವಧರ್ಮ ಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಭಾರತೀಯ ಸನಾತನ ಸಂಪ್ರದಾಯದ ತಳಹದಿ ಮೇಲೆ ಮುನ್ನೆಲೆಗೆ ಬರುವವರು ವಿಶ್ವನಾಯಕನಾಗುತ್ತಾರೆ ಎಂದು ತಿಳಿಸಿದರು.
ದೇವಸ್ಥಾನ ನಿರ್ಮಾಣದಲ್ಲಿ ಗ್ರಾಮಸ್ಥರ ಶ್ರಮ ಹೆಚ್ಚಿದ್ದು, ದೇವರ ಕಾರ್ಯಗಳಿಗೆ ಕೈಜೋಡಿಸುವರನ್ನು ಭಗವಂತ ಸಮೃದ್ಧವಾಗಿ ಇಡುತ್ತಾನೆ. ಭಗವಂತನ ಕೃಪಾಶೀರ್ವಾದ ಅವಶ್ಯ. ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಭಗವಂತನಲ್ಲಿ ನಂಬಿಕೆ ಇಟ್ಟರೆ ಎಲ್ಲವೂ ಸಾಧ್ಯ. ಸಮಾಜಗಳು ಸಾಮಾಜಿಕವಾಗಿ ಆರ್ಥಿಕವಾಗಿ ಮುನ್ನೆಲೆಗೆ ಬರಬೇಕು.
 ಶಾರದಾ ಪೂರ‌್ಯಾನಾಯ್ಕಾ
ಗ್ರಾಮಾಂತರ ಶಾಸಕಿ
ಸಮಾಜ ಮುಖಂಡರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು. ಆಧುನಿಕತೆ ದಾಪುಗಾಲಿನಲ್ಲಿ ಶೈಕ್ಷಣಿಕವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಸಮಾಜಕ್ಕೆ ಶೈಕ್ಷಣಿಕ ಕ್ರಾಂತಿಯ ಅವಶ್ಯಕತೆ ಇದೆ. ಶಾಲೆಗಳನ್ನು ನಿರ್ಮಾಣ ಮಾಡಬೇಕು. ಸಮಾಜ ಸಂಘಟಿತವಾಗಿ ಸರ್ಕಾರಿ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು.
 ಮರಿಯೋಜಿ ರಾವ್
ಮರಾಠ ಸಮಾಜ ನಿಗಮದ ಅಧ್ಯಕ್ಷ 
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸತೀಶ್ ಸಾವಂತ್, ಯಶ್ವಂತರಾವ್ ಘೋರ್ಪಡೆ, ಶ್ರೀನಿವಾಸ ಕರಿಯಣ್ಣ, ಮಲ್ಲೇಶ ರಾವ್, ಆರ್.ಉಮೇಶ್, ಸಚಿನ್ ಸಿಂಧ್ಯಾ, ಮುರಾರಿ ರಾವ್, ಸಂಪತ್‌ಕುಮಾರ್ ಇತರರಿದ್ದರು.
ಕೆಲವರ ಮೊಬೈಲ್ ಕಳ್ಳತನ: ದೇವಸ್ಥಾನ ಪ್ರವೇಶೋತ್ಸವದ ಸಮಾರಂಭದಲ್ಲಿ ಮೊಬೈಲ್ ಹಾಗೂ ಜೇಬುಗಳ್ಳರ ಹಾವಳಿ ಹೆಚ್ಚಾಗಿತ್ತು. ದೇವಸ್ಥಾನದ ಆವರಣಕ್ಕೆ ಗಣ್ಯರು ಬಂದಾಗ ಜನ ಒಟ್ಟಾಗಿರುವುದನ್ನು ಲಾಭ ಮಾಡಿಕೊಂಡ ಕಳ್ಳರು ಕೈಚಳಕ ತೋರಿದ್ದಾರೆ. ಕೆಲವರ ಮೊಬೈಲ್ ಹಾಗೂ ಪರ್ಸ್ ಕಳ್ಳತನವಾಗಿವೆ. ಕಳ್ಳತನದ ಬಗ್ಗೆ ಮೈಕ್‌ನಲ್ಲಿ ಎಚ್ಚರಿಕೆ ನೀಡುವಷ್ಟರಲ್ಲಿ ಕೆಲವರ ಮೊಬೈಲ್ ಕಳ್ಳರ ಪಾಲಾಗಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net