ಅಂಗವಿಕಲರನ್ನು ಮುಖ್ಯವಾಹಿನಿಗೆ ತನ್ನಿ | Information Workshop
ಸಾಗರ ತಾಲೂಕಿನ ಮುಂಗರವಳ್ಳಿಯಲ್ಲಿ ಅಂಗವಿಕಲ ಮಕ್ಕಳಿಗೆ ಆಯೋಜಿಸಿದ್ದ ಸಮುದಾಯ ಆಧಾರಿತ ಪುನರ್ವಸತಿ ಮಾಹಿತಿ ಕಾರ್ಯಾಗಾರವನ್ನು ತಹಸೀಲ್ದಾರ್ ಡಾ. ಪ್ರತಿಭಾ ಉದ್ಘಾಟಿಸಿದರು. ಸುವರ್ಣಾ ನಾಯಕ್, ಬಿ.ಎಚ್.ರಾಘವೇಂದ್ರ, ಜೀವನ್, ಸುಮಿತ್ರಾ ಇತರರಿದ್ದರು.
ಸಾಗರ: ಸೂಕ್ತ ಅವಕಾಶ ದೊರಕಿಸಿಕೊಟ್ಟು, ವಿಶೇಷ ತರಬೇತಿ ನೀಡಿದರೆ ಅಂಗವಿಕಲ ಮಕ್ಕಳು ಆಕಾಶಕ್ಕೆ ಕೈಚಾಚಬಲ್ಲರು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರದು ಎಂದು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿದರು.
ತಾಲೂಕಿನ ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸ್ಪಾಸ್ಟಿಕ್ಸ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ ಸಮುದಾಯ ಆಧಾರಿತ ಪುನರ್ವಸತಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗಾಂಗಗಳು ಸರಿಯಿದ್ದವರು ಸಾಧನೆ ಮಾಡುವುದು ವಿಶೇಷವಲ್ಲ. ಆದರೆ ವಿಶೇಷ ಮಕ್ಕಳು ಸಾಧನೆ ಮಾಡುವುದು ಗಮನಾರ್ಹ. ಚೈತನ್ಯ ವಿಶೇಷ ಶಾಲೆ ಮಕ್ಕಳು ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಇವರಿಗೆ ಇನ್ನಷ್ಟು ತರಬೇತಿ ಸಿಕ್ಕರೆ ಇನ್ನಷ್ಟು ಯಶಸ್ಸು ಕಾಣುತ್ತಾರೆ ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುವರ್ಣಾ ನಾಯಕ್ ಮಾತನಾಡಿ, ವಿಶೇಷ ಮಕ್ಕಳಿಗೆ ಸಂಬಂಧಿಸಿದ ಶಿಬಿರ, ಕಾರ್ಯಾಗಾರಗಳನ್ನು ಏರ್ಪಡಿಸಿದರೆ ಅನೇಕ ಪಾಲಕರು ಇದರಿಂದ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಮಕ್ಕಳ ಭವಿಷ್ಯಕ್ಕೆ ಇಂತಹ ಶಿಬಿರ ಅತ್ಯಂತ ಪೂರಕ. ಇಲ್ಲಿ ಉತ್ತಮ ಶಿಕ್ಷಣ ದೊರೆತರೆ ಅವರು ಉನ್ನತಿ ಸಾಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಬಿ.ಎಚ್.ರಾಘವೇಂದ್ರ, ಜೀವನ್, ಸುಮಿತ್ರಾ, ತನುಜ್ ಶೆಟ್ಟಿ, ಸುರೇಶ್, ಶಾಂತಲಾ, ಜ್ಯೋತಿ, ಎಂ.ನಾಗರಾಜ್, ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆ, ಸಾಗರ ಮತ್ತು ಹೊಸನಗರ ತಾಲೂಕಿನ ಮಕ್ಕಳು ಪಾಲ್ಗೊಂಡಿದ್ದರು.