ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಮಹೇಶ್ ಉದ್ಘಾಟಿಸಿದರು. ಮನಸ್ವಿನಿ, ಡಾ. ಪ್ರಭು ಸಾಹುಕಾರ, ದೇಸಾಯಿ ಗೌಡ ಇತರರಿದ್ದರು.
ಸೊರಬ: ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಜತೆಗೆ ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಠ ಕೆಲಸ ಎಂದು ಉದ್ರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಮಹೇಶ್ ಹೇಳಿದರು.
ತಾಲೂಕಿನ ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಗುರುವಾರ ಜಿಲ್ಲಾ ಆಯುಷ್, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ, ಜಿಲ್ಲಾ ರಕ್ತನಿಧಿ ಘಟಕ, ಮೆಗ್ಗಾನ್ ಬೋಧನಾ ಸಂಸ್ಥೆ ಶಿವಮೊಗ್ಗ, ಶ್ರೀ ವೀರಭದ್ರೇಶ್ವರ ಯುವಕರ ಸಂಘ ಮತ್ತಿತರ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಆರನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನದಿಂದ ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಿದ ಸಾರ್ಥಕ್ಯ ಉಂಟಾಗುತ್ತದೆ. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಬಹುದು. ಇದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ಕೆಲವು ಕಾಯಿಲೆಗಳಿಗೆ ಪ್ರತಿ ತಿಂಗಳು ರಕ್ತದ ಅವಶ್ಯಕತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ರಕ್ತ ಮುಖ್ಯವಾಗುತ್ತದೆಯೇ ಹೊರತು ಜಾತಿ, ಧರ್ಮ ಪರಿಗಣನೆಗೆ ಬರುವುದಿಲ್ಲ ಎಂಬುದನ್ನು ಅರಿತು ನಡೆಯಬೇಕಿದೆ. ಎಲ್ಲ ಸಮುದಾಯಗಳ ಜನರು ಸಹೋದರತ್ವ, ಭ್ರಾತ್ವತ್ವದೊಂದಿಗೆ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದರು.
ಸೊರಬ ತಾಲೂಕು ಆಸ್ಪತ್ರೆಯ ಡಾ. ಪ್ರಭು ಕೆ. ಸಾಹುಕಾರ ಮಾತನಾಡಿ, ಉದ್ರಿ ಗ್ರಾಮದಲ್ಲಿ ಸತತ ಆರು ವರ್ಷಗಳ ಕಾಲ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಸಂತಸದ ವಿಷಯ. ಇಂತಹ ಸಮಾಜಮುಖಿ ಕಾರ್ಯವನ್ನು ಮುಂದುವರಿಸಿದರೆ ಯುವಜನರಿಗೆ ಪ್ರೇರಣೆ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಉದ್ರಿ ಗ್ರಾಪಂ ಮಾಜಿ ಅಧ್ಯಕ್ಷೆ ಮನಸ್ವಿನಿ, ಡಾ. ಜ್ಞಾನೇಶ್, ಭಾರತಿ ಹನುಮಂತಪ್ಪ, ಸವಿತಾ ಭಟ್, ದೇಸಾಯಿ ಗೌಡ, ಸತೀಶ್ ಗೌಡ, ಸುರೇಶ, ಭೀಮಪ್ಪ, ಬಲೀಂದ್ರಪ್ಪ, ಮನೋಜ್, ಬಸವರಾಜ್, ಹನುಮಂತಪ್ಪ ಚಾಪೇರ್, ಸದಾಶಿವ ಪಾಟೀಲ್, ಚಾಲುಕ್ಯ ಪಾಟೀಲ್, ಹಾದಿ ಗೋಪಾಲ, ತಾರಕೇಶ್ ಇತರರಿದ್ದರು.