ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಾಗಾರವನ್ನು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಉದ್ಘಾಟಿಸಿದರು. ಆಯನೂರು ಮಂಜುನಾಥ್, ಕಲಸೆ ಚಂದ್ರಪ್ಪ, ಪ್ರಫುಲ್ಲಾ ಮಧುಕರ್ ಇತರರಿದ್ದರು.
ಸಾಗರ: ಮತದಾರರನ್ನು ಪಟ್ಟಿಯಲ್ಲಿ ಇರುವಂತೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ಸಂಚು ರೂಪಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಶೃಂಗೇರಿ ಶಂಕರಮಠದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಮತದಾರರನ್ನು ಪಟ್ಟಿಯಿಂದ ಹೊರಗೆ ಹಾಕುವ ಮೂಲಕ ಅನುಕೂಲಸಿಂಧು ರಾಜಕಾರಣಕ್ಕೆ ಮುಂದಾಗಿದೆ ಎಂದು ದೂರಿದರು.
ರಾಜ್ಯದಲ್ಲಿ 7 ಕೋಟಿ ಮತದಾರರಿದ್ದು, ಎಸ್‌ಐಆರ್‌ಗೆ ಒಂದು ತಿಂಗಳು ಕಾಲಾವಕಾಶ ನೀಡುವ ಮೂಲಕ ಲಕ್ಷಾಂತರ ಮತದಾರರು ಮಾಹಿತಿಯೇ ಇಲ್ಲದೆ ಮತದಾರರ ಪಟ್ಟಿಯಿಂದ ಹೊರಹೋಗುವ ವಾತಾವರಣ ಇದೆ. ಕಾಂಗ್ರೆಸ್ ಪ್ರತಿ ಬೂತ್‌ನಲ್ಲೂ ಎಚ್ಚರಿಕೆಯಿಂದ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಿರ್ವಹಿಸಬೇಕು ಎಂದರು.
ದೇಶದಲ್ಲಿ ರಾಹುಲ್ ಗಾಂಧಿ ಒಬ್ಬರಿಂದಲೇ ಬದಲಾವಣೆ ಸಾಧ್ಯವಿಲ್ಲ. ಅವರ ಹೋರಾಟಕ್ಕೆ ನಾವೆಲ್ಲ ಕೈಜೋಡಿಸಬೇಕು. ದೇಶದಲ್ಲಿ ಬಿಜೆಪಿಗೆ ಪ್ರತಿರೋಧ ನೀಡುತ್ತಿರುವುದು ಕರ್ನಾಟಕ ರಾಜ್ಯ ಮಾತ್ರ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಎಸ್‌ಐಆರ್ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಕಿಮ್ಮನೆ ರತ್ನಾಕರ್ಮಾಜಿ ಸಚಿವ
ರಾಜ್ಯದಲ್ಲಿ ಕಾಂಗ್ರೆಸ್ 140 ಶಾಸಕರನ್ನು ಹೊಂದಿದ್ದು, ಸಮೀಕ್ಷೆ ಪ್ರಕಾರ ಎಸ್‌ಐಆರ್ ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ ಮುಂದಿನ ಚುನಾವಣೆಯಲ್ಲಿ 97 ಸ್ಥಾನ ಕಳೆದುಕೊಳ್ಳುತ್ತೇವೆ ಎನ್ನುವ ವರದಿ ಇದೆ. ಕಾರ್ಯಕರ್ತರು ನಿರ್ಲಕ್ಷೃ ಮಾಡದೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಸ್‌ಐಆರ್ ಮೂಲಕ ಅಳಿವು ಉಳಿವಿನ ಹೋರಾಟ ಪ್ರಾರಂಭವಾಗಿದೆ. ಸೈದ್ಧಾಂತಿಕ ರಾಜಕೀಯ ಅಸ್ತಿತ್ವಕ್ಕಾಗಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಎಸ್‌ಐಆರ್ ಅರ್ಥ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಿಂದ ಒಬ್ಬರೂ ಹೊರಗುಳಿಯದಂತೆ ನೋಡಿಕೊಳ್ಳಬೇಕು.
ಆಯನೂರು ಮಂಜುನಾಥ್
ಮಾಜಿ ಸಂಸದ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಪ್ರಫುಲ್ಲಾ ಮಧುಕರ್, ಬಿ.ಆರ್.ಜಯಂತ್, ಅನಿತಾಕುಮಾರಿ, ಕಲಗೋಡು ರತ್ನಾಕರ್, ಸುರೇಶ್ ಬಾಬು, ಉಷಾ, ಪ್ರಭಾವತಿ, ಸದ್ದಾಂ ದೊಡ್ಮನೆ, ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಕಬೀರ್, ದಿನೇಶ್ ಇದ್ದರು.