ಪರಿವರ್ತನೆಗೆ ಭಗವದ್ಗೀತೆ ಅತ್ಯುತ್ತಮ ಕೈಪಿಡಿ

ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
Published on
ಶಿವಮೊಗ್ಗ: ಜೀವನದಲ್ಲಿ ನಾವು ತಪ್ಪುಗಳನ್ನು ಮಾಡಿದರೆ ಹೇಗೆ ತಿದ್ದಿಕೊಳ್ಳಬೇಕು. ತಪ್ಪು ಮಾಡದಂತೆ ಹೇಗೆ ಇರಬೇಕು. ಶೋಕ ಮತ್ತು ಚಿಂತೆಗಳಿಂದ ಹೊರಬರಲು ಸರಿಯಾದ ದಾರಿ ಯಾವುದು ಎಂಬುದನ್ನು ತಿಳಿಯಲು ಭಗವದ್ಗೀತೆ ತುಂಬ ಸಹಾಯ ಮಾಡುತ್ತದೆ. ಮನ ಪರಿವರ್ತನೆಗೆ ಭಗವದ್ಗೀತೆಯಂತಹ ಅತ್ಯುತ್ತಮ ಗ್ರಂಥ ಬೇರೆ ಯಾವುದೂ ಇಲ್ಲ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಭಗವದ್ಗೀತಾ ಅಭಿಯಾನ-2025ರ ಅಂಗವಾಗಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಶಿವಮೊಗ್ಗ ಸ್ವರ್ಣರಶ್ಮೀ ಟ್ರಸ್ಟ್ ಆಶ್ರಯದಲ್ಲಿ ಕೇಂದ್ರ ಕಾರಾಗೃಹದ ಸಂಜೀವಿನಿ ವಿಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರವಚನ ನೀಡಿದರು.
ಗೀತೆಯನ್ನು ನಿತ್ಯ ಪಾರಾಯಣ ಮಾಡಿದಾಗ ದೈವೀ ಸಂಬಂಧ, ಒಳ್ಳೆಯ ಗುಣಗಳು ಹೆಚ್ಚುತ್ತವೆ. ಕೆಟ್ಟ ಗುಣಗಳಿಂದ ದೂರವಾಗುವಂತಹ ಉದ್ಧಾರದ ಹಾದಿಯನ್ನು ಭಗವಂತ ತೋರಿಸುತ್ತಾನೆ ಎಂದರು.
ಕಳೆದ 18 ವರ್ಷಗಳಿಂದ ರಾಜ್ಯದಾದ್ಯಂತ ಭಗವದ್ಗೀತಾ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲ ಕಾರಾಗೃಹಗಳಲ್ಲಿಯೂ ಭಗವದ್ಗೀತಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಎರಡು ಬಾರಿ ಭಗವದ್ಗೀತಾ ಅಭಿಯಾನ ನಡೆದಿದ್ದು, ಅಲ್ಲಿನ ಕೈದಿ ಮಂಜುನಾಥ ಎಂಬಾತ ಗೀತಾ ಅಭಿಯಾನದಿಂದ ಪ್ರೇರಣೆ ಪಡೆದು ಬಿಡುಗಡೆಯ ನಂತರ ಉನ್ನತ ವ್ಯಾಸಂಗ ಕೈಗೊಂಡು ಪ್ರಸ್ತುತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಭಗವದ್ಗೀತೆಯಿಂದ ಸಿಗುವ ಸತ್ಪ್ರೇರಣೆಗೆ ಉತ್ತಮ ಉದಾಹರಣೆ ಎಂದು ವಿವರಿಸಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜೈಲು ಸೇರಿದ್ದ ಬಾಲಗಂಗಾಧರ ತಿಲಕರು ಜೈಲಿನಲ್ಲಿದ್ದುಕೊಂಡೇ ಗೀತಾ ರಹಸ್ಯ ಎಂಬ ಗ್ರಂಥವನ್ನು ರಚಿಸುತ್ತಾರೆ. ಅರವಿಂದ ಘೋಷ್ ಹಾಗೂ ಇನ್ನೂ ಅನೇಕ ನಾಯಕರು ಜೈಲುವಾಸದ ನಡುವೆ ಭಗವದ್ಗೀತೆಯ ಓದು ಮತ್ತು ಅಧ್ಯಯನದಿಂದ ಆಧ್ಯಾತ್ಮಿಕ ಸಾಧನೆ ನಡೆಸಿದ್ದನ್ನು ಕೇಳಿದ್ದೇವೆ. ಜೈಲಿನಲ್ಲಿ ಉತ್ತಮ ನಡತೆ ರೂಪಿಸಿಕೊಳ್ಳಲು ಗೀತಾ ಾರಾಯಣ ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ, ಭಗವದ್ಗೀತಾ ಅಭಿಯಾನದ ಪ್ರಧಾನ ಸಂಚಾಲಕ ಪಿ.ಪಿ.ಹೆಗಡೆ,  ಮಹೇಂದ್ರ ಹೆಗಡೆ, ಲಕ್ಷ್ಮೀನಾರಾಯಣ ಜೋಶಿ, ವೆಂಕಟರಮಣ ಭಟ್, ವಿನುತಾ ಜೋಶಿ, ಸುಜಾತಾ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ಆರ್.ಪ್ರೀತಿ, ಶಿಕ್ಷಕರಾದ ಗೋಪಾಲಕೃಷ್ಣ, ಎಸ್.ಎನ್.ಲೀಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net