ಭದ್ರಾ ನದಿ ಹಳೆಯ ಸೇತುವೆಗೆ ಆಪತ್ತು

ಭದ್ರಾವತಿ ಹಳೇ ಸೇತುವೆ ತಡೆಗೋಡೆ ಮೇಲೆ ಗಿಡಗಳು ಬೆಳೆದಿರುವುದು.
ಭದ್ರಾವತಿ ಹಳೇ ಸೇತುವೆ ತಡೆಗೋಡೆ ಮೇಲೆ ಗಿಡಗಳು ಬೆಳೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 74,997 ರೂ. ವೆಚ್ಚದಲ್ಲಿ ನಿರ್ಮಾಣ
  • 1860ರಲ್ಲಿ ಸೇತುವೆ ನಿರ್ಮಾಣ
  • ನೂರಾರು ವರ್ಷಗಳ ಇತಿಹಾಸ
ಬಸವರಾಜ್ ಭದ್ರಾವತಿ
ನಗರಸಭೆ ಕಚೇರಿ ಸಮೀಪದ ಭದ್ರಾ ಸೇತುವೆಯ ತಡೆಗೋಡೆಗಳ ಮೇಲೆ ಗಿಡಗಂಟಿಗಳು ಬೆಳೆದು ಮರವಾಗುತ್ತಿವೆ. ಸೇತುವೆ ಶಿಥಿಲವಾಗುತ್ತಿದ್ದರೂ ನಗರಸಭೆ ಹಾಗೂ ಪಿಡಬ್ಲುೃಡಿ ಅಧಿಕಾರಿಗಳು ಕಂಡೂ ಕಾಣದಂತೆ ಮೌನವಾಗಿದ್ದಾರೆ. ಗಿಡಗಂಟಿ ತೆರವುಗೊಳಿಸಿ ಸೇತುವೆ ರಕ್ಷಣೆ ಮಾಡಬೇಕೆಂಬ ಕಾಳಜಿಯನ್ನೇ ತೋರುತ್ತಿಲ್ಲ.
ನಗರ ಸೌಂದರ್ಯಕ್ಕೆ ಒತ್ತು ನೀಡುವ ಜತೆಗೆ ನಗರಸಭೆ ವ್ಯಾಪ್ತಿಯ ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ ನಗರಸಭೆಯು ಸೇತುವೆ ಅಭಿವೃದ್ಧಿ ಪಿಡಬ್ಲುೃಡಿಗೆ ಸೇರಿದೆ. ನನಗ್ಯಾಕೆ ಅದರ ಉಸಾಬರಿ ಎಂದು ಮೌನವಹಿಸಿದೆ. ಇತ್ತ ಪಿಡಬ್ಲುೃಡಿ ಅಧಿಕಾರಿಗಳು ಏನೂ ಗೊತ್ತಿಲ್ಲದವರಂತೆ ತಟಸ್ಥರಾಗಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಭದ್ರಾ ನದಿ ಸೇತುವೆಯನ್ನು ಉಳಿಸುವವರು ಯಾರು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
ನಗರಸಭೆ ಕಚೇರಿ ಸಮೀಪ ಭದ್ರಾ ನದಿಗೆ ಕ್ರಿಶ 1860ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆಗಿನ ಮೈಸೂರು ರಾಜ್ಯದ ಪಿಡಬ್ಲುೃಡಿ 74,997 ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಇಟ್ಟಿಗೆ ಹಾಗೂ ಸಿಮೆಂಟ್ ಬಳಸಿ ಕಟ್ಟಲಾಗಿರುವ ಸೇತುವೆ ಇಂದಿಗೂ ಗಟ್ಟಿಯಾಗಿದೆ. ಇದರ ಮೇಲೆ ಸಾರ್ವಜನಿಕರು ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದ್ದರಿಂದ ಅಲ್ಲಲ್ಲಿ ಗೋಡೆಯ ಮೇಲ್ಪದರ ಕಿತ್ತುಹೋಗಿದೆ. ಬಿರುಕು ಬಿಡುವಂತಾಗಿದೆ. ಅಂತಹ ಜಾಗದಲ್ಲಿ ಪಕ್ಷಿಗಳು ತಿನ್ನಲು ತರುವ ಹಣ್ಣು, ಇತರೆ ಧಾನ್ಯಗಳನ್ನು ಅಲ್ಲಿಯೇಬಿಟ್ಟು ಹೋಗುವುರಿಂದ ಆ ಬೀಜಗಳು ಸಸಿಯಾಗಿ, ದೊಡ್ಡದಾಗಿ ಬೆಳೆದು ಸೇತುವೆಗೆ ಹಾನಿಯಾಗುತ್ತಿದೆ.
ಪ್ರಸ್ತುತ ಕೋಟಿಗಟ್ಟಲೆ ಹಣ ವ್ಯಯಿಸಿ ಹೊಸ ಸೇತುವೆ ನಿರ್ಮಿಸಿದರೂ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದು ಕಷ್ಟ. ಆದರೆ ಮೈಸೂರು ರಾಜರ ಕಾಲದಲ್ಲಿ ನಿರ್ಮಾಣಗೊಂಡು ಇಂದಿಗೆ 165 ವರ್ಷಗಳು ಕಳೆದರೂ ಈ ಸೇತುವೆ ಗಟ್ಟಿಮುಟ್ಟಾಗಿದೆ. ಇಂತಹ ಸೇತುವೆಯನ್ನು ಉಳಿಸಿಕೊಂಡಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಸಾಧ್ಯ.
ನಾಡ ದಸರಾದಲ್ಲಷ್ಟೇ ಸುಣ್ಣ-ಬಣ್ಣ: ನಗರಸಭೆಯಿಂದ ಪ್ರತಿವರ್ಷ ಅದ್ದೂರಿಯಾಗಿ ಆಚರಿಸಲಾಗುವ ದಸರಾ ಮಹೋತ್ಸವದಲ್ಲಿ ಮಾತ್ರ ಈ ಹಳೇ ಸೇತುವೆ ಸುಣ್ಣ-ಬಣ್ಣ ಕಾಣುತ್ತದೆ. ಹಳೇ ಸೇತುವೆಗೆ ಹೊಂದಿಕೊಂಡಂತೆ ಈಗ ಮತ್ತೊಂದು ಹೊಸ ಸೇತುವೆ ನಿರ್ಮಿಸಿದ್ದರೂ ಸಂಚಾರಕ್ಕೆ ಹಳೇ ಸೇತುವೆಯೂ ಅನಿವಾರ್ಯವಾಗಿದೆ. ಹೊಸ ಸೇತುವೆ ನಿರ್ಮಾಣದ ಸಂದರ್ಭ ಹಳೇ ಸೇತುವೆಯನ್ನು ನಗರಸಭೆ ಅಧಿಕಾರಿಗಳು ಮರೆತಿದ್ದಾರೆ. ಪಿಡಬ್ಲುೃಡಿ ಗಮನ ಸೆಳೆದು ಸರ್ಕಾರದ ಯಾವುದಾದರೂ ಯೋಜನೆಯಿಂದ ಹಣ ತೊಡಗಿಸಿ ಸೇತುವೆ ಕೆಳಭಾಗದಿಂದ ತಡೆಗೋಡೆವರೆಗೆ ಸುತ್ತಲೂ ಬೆಳೆದಿರುವ ಗಿಡಗಳನ್ನು ತೆಗೆಸಿ ಸೇತುವೆಯನ್ನು ರಕ್ಷಿಸಬೇಕು ಎಂಬುದು ನಾಗರಿಕರ ಒತ್ತಾಯ.
ಸೇತುವೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುವಂತೆ ನಗರಸಭೆಯಿಂದ ಪಿಡಬ್ಲುೃಡಿ ಅಧಿಕಾರಿಗಳ ಗಮನಕ್ಕೆ ಎರಡು ಬಾರಿ ತಂದಿದ್ದೇವೆ. ಇದೀಗ ಮತ್ತೊಮ್ಮೆ ತಿಳಿಸಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎನ್ನುತ್ತಾರೆ ಪೌರಾಯುಕ್ತ ಕೆ.ಎನ್.ಹೇಮಂತ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net