ಕೋಟ್ಯಂತರ ರೂ. ಮೌಲ್ಯದ ಮರಳು ನಾಪತ್ತೆ, ಅಧಿಕಾರಿಗಳು ಶಾಮೀಲು
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆರೋಪ
ಜಿಲ್ಲೆಯ 25 ಕಡೆ ದಾಳಿ ನಡೆಸಿ ಜಪ್ತಿ ಮಾಡಿದ್ದ ಮರಳು
ಶಿವಮೊಗ್ಗ: ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ಅದಿರನ್ನು ಬೇಲೆಕೇರಿ(Belekeri)ಯಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿಡಲಾಗಿತ್ತು. ಬಳಿಕ ಅದಿರನ್ನು ಕೆಲವರು ಅಕ್ರಮವಾಗಿ ಸಾಗಣೆ ಮಾಡಿದ್ದರು. ಅದೇ ರೀತಿ ಜಿಲ್ಲೆಯಲ್ಲಿ ಲೋಕಾಯುಕ್ತರು ವಶಕ್ಕೆ ಪಡೆದ ಕೋಟ್ಯಂತರ ರೂ. ಮೊತ್ತದ ಮರಳನ್ನು ಕೆಲವರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್(KB Prasannakumar) ಗಂಭೀರವಾಗಿ ಆರೋಪಿಸಿದರು.
ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು(Lokayukta OfficerS) ಶಿವಮೊಗ್ಗ ಜಿಲ್ಲೆಯ 25 ಕಡೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಮರಳು, 50ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆದರೆ ಜಪ್ತಿ ಮಾಡಿದ್ದ ಮರಳು ಸರ್ಕಾರಿ ಕಾಮಗಾರಿಗಳಿಗೆ ಬಳಕೆ ನೆಪದಲ್ಲಿ ಕಾಳದಂಧೆ ಮೂಲಕವೇ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2008ರಲ್ಲಿ ಬೇಲೆಕೇರಿಯಲ್ಲಿ ಸಂಗ್ರಹಿಸಿದ್ದ ಅದಿರನ್ನು ರಾತ್ರೋರಾತ್ರಿ ಸಾಗಣೆ ಮಾಡಲಾಗಿತ್ತು. ಇದೀಗ ಶಿವಮೊಗ್ಗದಲ್ಲೂ ದೊಡ್ಡಮಟ್ಟದ ಹಗರಣ ನಡೆಯುತ್ತಿದ್ದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಕ್ರಮ ಮರಳು(illegal sand) ಸಂಗ್ರಹ ಮತ್ತು ಸಾಗಣೆಗೆ ಅಧಿಕಾರಿಗಳು, ಸರ್ಕಾರವೇ ಇಂಬು ಕೊಡುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ ಎಂದರು.
ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪೊಲೀಸ್ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾಡಳಿತ 22 ಮರಳು ಬ್ಲಾಕ್(Sand block)ಗಳನ್ನು ತೆರೆದು 11 ತಿಂಗಳು ಕಳೆದರೂ ಅಧಿಕೃತ ಟೆಂಡರ್‌ದಾರರಿಗೆ ಮರಳು ತೆಗೆಯಲು ಅವಕಾಶವನ್ನೇ ಕಲ್ಪಿಸಿಲ್ಲ. ಹಾಗಾಗಿ ಅನಧಿಕೃತವಾಗಿ ಕ್ವಾರೆಗಳನ್ನು ತೆರೆದು ಸರ್ಕಾರಕ್ಕೂ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡುತ್ತಿದ್ದಾರೆ. ಶಿವಮೊಗ್ಗದಿಂದ ಗುಣಮಟ್ಟದ ಮರಳು ಬೆಂಗಳೂರು ವಿವಿಧ ನಗರಗಳಿಗೂ ಸರಬರಾಜಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಗೋವಿಂದ ಆ್ಯಂಡ್ ಕಂಪನಿ ಸಕ್ರಿಯ
ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಗೋವಿಂದ ಆ್ಯಂಡ್ ಗೋವಿಂದ ಕಂಪನಿ(Govinda And Govinda Company) ಸಕ್ರಿಯವಾಗಿದೆ. ಅದನ್ನು ಸ್ವತಃ ಕುವೆಂಪುನಗರದಲ್ಲಿರುವ ಕಚೇರಿಯ ಕೆಳಹಂತದ ಅಧಿಕಾರಿಗಳೇ ಹೇಳುತ್ತಿದ್ದಾರೆ. ಗೋವಿಂದ ಆ್ಯಂಡ್ ಗೋವಿಂದ ಕಂಪನಿ ಆಡಿದ್ದೇ ಆಟವಾಗಿದೆ. ಮರಳು ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೂ ಕೆಳಹಂತದ ಅಧಿಕಾರಿಗಳಿಗೆ ಈ ಕಂಪನಿ ಸಹಕಾರ ಕೊಡುತ್ತಿಲ್ಲ. ದಾಳಿಗೆ ವಾಹನಗಳನ್ನು ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಎಂದು ದೂರಿದರು.
ಆ ಅಧಿಕಾರಿಗೆ ಗೊವಿಂದ ಆ್ಯಂಡ್ ಗೋವಿಂದ ಕಂಪನಿ ಎಂಬ ಹೆಸರಿದೆ. ಕಾನೂನು ಪ್ರಕಾರ ನಡೆದುಕೊಳ್ಳುವರಿಗೆ ಬಹಳ ಆತ ಕಟ್ಟುನಿಟ್ಟಿನ ಅಧಿಕಾರಿ. ಅನಧಿಕೃತವಾಗಿ ದಂಧೆ ನಡೆಸುವವರಿಗೆ ಎಲ್ಲಿಲ್ಲದ ಪ್ರೀತಿ ತೋರುತ್ತಾರೆ. ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಪಾಲಾಗುತ್ತಿದ್ದ ಸುಮಾರು 8ರಿಂದ 10 ಕೋಟಿ ರೂ. ಮೌಲ್ಯದ ಮರಳು ಜಪ್ತಿ ಮಾಡಿದ್ದು, ಇದೀಗ ಅಷ್ಟೂ ಮರಳು ಖಾಲಿ ಆಗುತ್ತಿದೆ. ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ(Department of Mines and Geology)ಯನ್ನು ಈ ಬಗ್ಗೆ ಪ್ರಶ್ನಿಸಿದರೆ ಅದು ಲೋಕಾಯುಕ್ತದವರು ಮಾಡಿರುವ ಜಪ್ತಿ. ನಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ ಎಂದರು.
ನಗರ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಎಚ್.ಎಂ.ಸಂಗಯ್ಯ, ರಮೇಶ್ ನಾಯ್ಕ, ವೆಂಕಟೇಶ್, ರಘು, ದಯಾನಂದ್, ಸುನಿಲ್ ಗೌಡ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ಲೋಹಿತ್, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
"
ಜಿಲ್ಲಾಧಿಕಾರಿ ಮರಳು ಟಾಸ್ಕ್‌ಫೋರ್ಸ್ ಅಧ್ಯಕ್ಷರಾಗಿದ್ದಾರೆ. ಎಸ್‌ಪಿ ಕೂಡ ಜವಾಬ್ದಾರಿ ಹೊತ್ತುಕೊಂಡು ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಲು ಗಮನ ಹರಿಸಬೇಕು. ಜಿಲ್ಲೆಯಲ್ಲಿರುವ ಮರಳು ಸಮಸ್ಯೆ ಬಗೆಹರಿಸುವಂತೆ ಡಿಸಿ, ಎಸ್ಪಿ, ಸಿಎಂಗೂ ಒತ್ತಾಯ ಮಾಡುತ್ತೇನೆ. ಲೋಕಾಯುಕ್ತ ಪೊಲೀಸರಿಗೂ ಪತ್ರ ಬರೆಯುತ್ತೇನೆ.