ಭಗವದ್ಗೀತೆ ಅಧ್ಯಯನದಿಂದ ಜಾಗೃತಿ

ಸೊರಬದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿದರು. ಅನಂತಮೂರ್ತಿ ಭಟ್, ಪಾಣಿ ರಾಜಪ್ಪ, ಕಾಳಿಂಗರಾಜ್ ಇತರರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿದರು. ಅನಂತಮೂರ್ತಿ ಭಟ್, ಪಾಣಿ ರಾಜಪ್ಪ, ಕಾಳಿಂಗರಾಜ್ ಇತರರಿದ್ದರು.
Published on
ಸೊರಬ: ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಬೆಳೆಯಲು ಬೇಕಾಗುವ ಸತ್ವಭರಿತ ಸಂದೇಶದ ಗುಣಗಳು ಭಗವದ್ಗೀತೆಯಲ್ಲಿವೆ. ಹಾಗಾಗಿ ಮಕ್ಕಳಿಗೆ ಆರಂಭದಲ್ಲಿಯೇ ಭಗವದ್ಗೀತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಸ್ವರ್ಣ ರಶ್ಮಿ ಟ್ರಸ್ಟ್, ಶ್ರೀ ಭಗವದ್ಗೀತಾ ಅಭಿಯಾನ ತಾಲೂಕು ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಗವದ್ಗೀತೆಯು ಧಾರ್ಮಿಕ ಮತ್ತು ಆಂತರಿಕವಾಗಿ ಜಾಗೃತಿ ಉಂಟುಮಾಡುತ್ತಿದೆ. ಭಗವದ್ಗೀತೆಯ ಜ್ಞಾನವನ್ನು ಪಡೆದ ಭಕ್ತರು ಜನರಲ್ಲಿ ಅರಿವು ಮೂಡಿಸುವ ಚಿಂತನೆ ಮಾಡಬೇಕು. ಲೌಕಿಕ ಮತ್ತು ಆಧ್ಯಾತ್ಮಿಕ ಅನುಸಂಧಾನ ಉಂಟಾದಾಗ ಜಾಗೃತರಾಗಲು ಸಾಧ್ಯ. ಬದುಕಿನ ಸಾರ್ಥಕ್ಯದ ಬಗ್ಗೆ ತಿಳಿಸುವ ಸಂದೇಶ ಭಗವದ್ಗೀತೆಯಲ್ಲಿ ಇದೆ ಎಂದರು.
ಭಗವಂತನಲ್ಲಿ ನಾವು ಮಾಡಿಕೊಂಡ ಸಂಕಲ್ಪಗಳು ಮನಃಪೂರ್ವಕವಾಗಿ ಇರಬೇಕು. ಮನಸ್ಸಿನಲ್ಲಿ ಒಂದು, ಗುರಿ ಇನ್ನೊಂದು ಆಗಿರಬಾರದು. ನಮ್ಮಲ್ಲಿ ಸಾತ್ವಿಕ ಗುಣಗಳಿದ್ದಾಗ ಬೇಡಿಕೆಗಳು ಈಡೇರಲು ಸಾಧ್ಯ. ಸಂಸ್ಕಾರವಂತರಾಗಿ ಸಂಸಾರವನ್ನು ಸಸಾರವನ್ನಾಗಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಗೃಹಸ್ಥಾಶ್ರಮಕ್ಕೆ ಮಹತ್ವವಿದೆ. ಇಂತಹ ಆಶ್ರಮದಲ್ಲಿ ಭಗವದ್ಗೀತೆ ಪಠಣಗಳು ನಡೆದಾಗ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಪ್ರವಚನಕಾರ ಅನಂತಮೂರ್ತಿ ಭಟ್ ಕಾನುಸೂರ ಮಾತನಾಡಿ, ಭಗವಂತನನ್ನು ಸಾತ್ವಿಕವಾಗಿ ಪೂಜಿಸಲು ಶ್ರದ್ಧೆ ಬೇಕು. ಒಳ್ಳೆಯದರ ಕಡೆ ನಮ್ಮ ಯೋಚನೆ ಇರಬೇಕು. ಮೋಕ್ಷ ಸಂಪಾದಿಸಬೇಕು ಎಂದಾದರೆ ಮನಸ್ಸಿಗೆ ಭಗವಂತ ಬರಬೇಕು. ಹಾಗೆ ಬರಬೇಕಾದರೆ ಇಂದ್ರಿಯಗಳನ್ನು ಸ್ತಿಮಿತದಲ್ಲಿ ಇಟ್ಟುಕೊಳ್ಳಬೇಕು. ಭಗವಂತನ ನಾಮಸ್ಮರಣೆ ಮಾಡಿದಾಗ ಮಾತ್ರ ಮನಸ್ಸು ಹಿಡಿತಕ್ಕೆ ಬರಲು ಸಾಧ್ಯ ಎಂದರು.
ತಾಲೂಕು ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಮಾತನಾಡಿ, ಭಗವದ್ಗೀತೆ ಅಭಿಯಾನ ಅತ್ಯಂತ ಸರಳವಾಗಿ ಆರಂಭವಾಗಿ ಇಂದು ತಾಲೂಕಿನ ಜನತೆಯಲ್ಲಿ ಹೊಸ ಸಂದೇಶ ಮೂಡಿಸಿದೆ. ಇಂತಹ ಚಿಂತನ-ಮಂಥನಗಳು ನಡೆಯಬೇಕು ಎಂದರು.
ಅಭಿಯಾನದ ಗೌರವಾಧ್ಯಕ್ಷ ಪಾಣಿ ರಾಜಪ್ಪ, ಕಾರ್ಯದರ್ಶಿ ಕಾಳಿಂಗರಾಜ್, ಉದ್ಯಮಿ ನಾಗರಾಜ್ ಗುತ್ತಿ, ಡಿ.ಗುರುಮೂರ್ತಿ, ಶಿವಯೋಗಿ, ಸತ್ಯನಾರಾಯಣ ಹೆಗಡೆ, ಹನುಮಂತಪ್ಪ, ನಿಜಗುಣ ಚಂದ್ರಶೇಖರ್, ರೇಖಾ ಜಗದೀಶ್, ವಿಶ್ವನಾಥ, ನಟರಾಜ್, ಶ್ರೀಕಾಂತ್ ಶೇಟ್, ರೂಪಾ ಮಧುಕೇಶ್ವರ, ಅಣ್ಣಪ್ಪ, ಸರಸ್ವತಿ ನಾವುಡ, ಪೂರ್ಣಿಮಾ ಶಿವಯೋಗಿ, ಲಕ್ಷ್ಮೀ ಮುರುಳೀಧರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net