ಸಾಗರ: ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ತಡೆಯಾಜ್ಞೆ ತಂದಿರುವುದನ್ನು ತೆರವುಗೊಳಿಸಲು ನಮ್ಮ ಸಮಿತಿ ಪ್ರಯತ್ನಶೀಲವಾಗಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಸುಂದರ ಸಿಂಗ್ ಹೇಳಿದರು.
ನ.30ಕ್ಕೆ ಚುನಾವಣೆ ನಿಗದಿಯಾಗಿದ್ದು, ಎಲ್ಲ ಪ್ರಕ್ರಿಯೆ ಮುಗಿದಿರುವ ಸಂದರ್ಭದಲ್ಲಿಯೇ ಕೊರಮ ಸಮಾಜದವರು ಹೈಕೋರ್ಟ್‌ನಿಂದ ಚುನಾವಣೆ ನಡೆಸದಂತೆ ತಡೆಯಾಜ್ಞೆ ತಂದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆ ನಡೆಸುವ ಜಿಲ್ಲಾ ನ್ಯಾಯಾಲಯದ ಸೂಚನೆಯನ್ನು ನ್ಯಾಸ ಪ್ರತಿಷ್ಠಾನವು ಕಟ್ಟುನಿಟ್ಟಾಗಿ ಪಾಲಿಸಿದೆ. ಈಗಾಗಲೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ನ.24 ಕೊನೇ ದಿನವಾಗಿತ್ತು. ಚುನಾವಣೆಗೆ ಯಾವುದೇ ಅಡೆತಡೆ ಬರಬಾರದು ಎಂದು ಪ್ರತಿಷ್ಠಾನದಿಂದ ಕೆವಿಯೆಟ್ ಸಹ ತರಲಾಗಿತ್ತು. ಆದರೆ ಕೊರಮ ಸಮಾಜದವರು ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ದಾವೆ ಹೂಡಿದ್ದು, ಚುನಾವಣೆ ನಡೆಸದಂತೆ ಶನಿವಾರ ತಡೆಯಾಜ್ಞೆ ನೀಡಿದೆ ಎಂದು ಮಾಹಿತಿ ನೀಡಿದರು.
ಕೆಲವರು ತಡೆಯಾಜ್ಞೆ ತರಲು ನಮ್ಮ ಪ್ರತಿಷ್ಠಾನ ಕಾರಣ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಚುನಾವಣೆಗೆ ಯಾವುದೇ ಅಡೆತಡೆ ಬರಬಾರದು ನಾವೇ ಎಂದು ಕೆವಿಯೆಟ್ ತಂದಿದ್ದೇವೆ. ಅದನ್ನು ಮೀರಿ ನ್ಯಾಯಾಲಯ ಆದೇಶ ಮಾಡಿದೆ. ಈ ಬಗ್ಗೆ ಸಮಿತಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿದೆ. ನ್ಯಾಸ ಪ್ರತಿಷ್ಠಾನದ ಮೀಸಲು ಪಟ್ಟಿಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಮೇಲ್ಮನವಿ ಸಲ್ಲಿಸಿರುವ ಕೊರಮ ಸಮಾಜದ ಮನವೊಲಿಸಿ ನಿಗದಿತ ದಿನದಂದು ಚುನಾವಣೆ ನಡೆಸಲು ಪ್ರಯತ್ನ ನಡೆಸುತ್ತೇವೆ ಎಂದರು.