ಪಶ್ಚಿಮಘಟ್ಟದ ಮೇಲೆ ಪ್ರಹಾರ ಯತ್ನ | Protest against plan

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ, ಪರಿಸರ ಬಳಗದಿಂದ ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾರುತಿ ಗುರೂಜಿ, ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ದಿನೇಶ್ ಶಿರವಾಳ, ರಮೇಶ್ ಕೆಳದಿ ಇತರರಿದ್ದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ, ಪರಿಸರ ಬಳಗದಿಂದ ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾರುತಿ ಗುರೂಜಿ, ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ದಿನೇಶ್ ಶಿರವಾಳ, ರಮೇಶ್ ಕೆಳದಿ ಇತರರಿದ್ದರು.
Published on
ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ರಾಷ್ಟಭಕ್ತರ ಬಳಗ, ಪರಿಸರ ಬಳಗ ಹಾಗೂ ಜಿಲ್ಲಾ ರೈತ ಸಂಘದ ಆಶ್ರಯದಲ್ಲಿ ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸುರಿಯುವ ಮಳೆ ನಡುವೆಯೂ ಸಾವಿರಾರು ಜನರು ಪಾಲ್ಗೊಂಡು ಯೋಜನೆಯನ್ನು ವಿರೋಧಿಸಿದರು.
ಪಶ್ಚಿಮ ಘಟ್ಟದ ಶ್ರೇಣಿಗೆ ಮಾರಕವಾಗಿರುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುವುದರ ಹಿಂದೆ ಕೋಟ್ಯಂತರ ರೂ. ಸಂಪಾದನೆ ಉದ್ದೇಶವಿದೆ. ಸುಮಾರು 18 ಸಾವಿರ ಮರಗಳನ್ನು ಕಡಿಯುತ್ತಿದ್ದಾರೆ ಎಂದರೆ ಸದೃಢವಾಗಿರುವ 18 ಸಾವಿರ ಮಕ್ಕಳನ್ನು ಕೊಲ್ಲುತ್ತಿದ್ದಾರೆ ಎಂದೇ ನಾವು ಭಾವಿಸಬೇಕು. ಜೀವವೈವಿಧ್ಯಕ್ಕೆ ಹೆಸರಾದ ಪಶ್ಚಿಮ ಘಟ್ಟವನ್ನು ಈ ಯೋಜನೆ ಮೂಲಕ ನಾಶ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ದೂರಿದರು.
ಸಸಿ, ಮರಗಳನ್ನು ನಾವು ಮಕ್ಕಳು ಎಂದು ಭಾವಿಸುತ್ತಿದ್ದೇವೆ. ಯಾವ ಕಾರಣಕ್ಕೂ ಯೋಜನೆ ಜಾರಿಗೊಳ್ಳಲು ನಾವು ಬಿಡುವುದಿಲ್ಲ. ಪರಿಸರ ವಿರೋಧಿ ಯೋಜನೆ ವಿರುದ್ಧ ನಿಂತಿರುವ ಮಾರುತಿ ಗುರೂಜಿ ಅವರ ಬೆಂಬಲಕ್ಕೆ ನಾವೆಲ್ಲ ನಿಂತಿದ್ದು, ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ. ಎಂತಹ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.
ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೇ ಹಾಳುಮಾಡುವ ಇಂತಹ ಯೋಜನೆಗಳು ನಮಗೆ ಬೇಡ. ಇಂಧನ ಸಚಿವ ಜಾರ್ಜ್ ಅವರೇ ನಿಮಗೆ ಹಣ ಮಾಡಲೇಬೇಕು ಎಂದಾದರೆ ಬೇರೆ ಯೋಜನೆ ನೋಡಿ. ಅಂದಾಜು 3,500 ಕೋಟಿ ರೂ.ನಿಂದ ಆರಂಭವಾದ ಯೋಜನೆ ಈಗ 15 ಸಾವಿರ ಕೋಟಿ ರೂ. ದಾಟಿದೆ. ಮುಂದೆ ಇನ್ನೂ ಹೆಚ್ಚಾದರೂ ಅಚ್ಚರಿಯಿಲ್ಲ. ಹಣ ಲೂಟಿ ಮಾಡಿ, ಮರ ಕಡಿಯಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಯೋಜನೆ ನಿಲ್ಲಿಸಬೇಕು ಎಂದು ಎಲ್ಲ ಗುರುಗಳೂ ನಮಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಇ.ಕಾಂತೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಕಾರ್ಯಾಧ್ಯಕ್ಷ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಶ್ರೀಕಾಂತ್ ಇತರರಿದ್ದರು.

ತಡೆಯಾಜ್ಞೆ ಉಲ್ಲಂಘನೆ

ಲಿಂಗನಮಕ್ಕಿ ಜಲಾಶಯ ಬತ್ತಿದೆ. ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಶರಾವತಿ ನದಿ ಮತ್ತು ಕಣಿವೆ ಮೇಲೆ ನಿರಂತರವಾಗಿ ಪ್ರಹಾರ ನಡೆಯುತ್ತಲೇ ಇದೆ. ಇಲ್ಲಿಯ ಜನ ಆತಂಕದಿಂದಲೇ ಬದುಕುತ್ತಿದ್ದಾರೆ. ಇದರ ನಡುವೆ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತೊಂದು ಆಘಾತ ತಂದಿದೆ ಎಂದು ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಕಳವಳ ವ್ಯಕ್ತಪಡಿಸಿದರು. ಶರಾವತಿ ಕಣಿವೆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಹೊಸ ಹೊಸ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಮಾಹಿತಿ ಇದೆ. ಒಂದೂವರೆ ಲಕ್ಷ ಮರ ಕಡಿತಲೆ ಮಾಡುವ ಬಗ್ಗೆ ಅರಣ್ಯ ಇಲಾಖೆ ತಿಳಿಸುತ್ತಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ ಸರ್ಕಾರಗಳು ಇಂತಹ ಯೋಜನೆ ಮೂಲಕ ಭವಿಷ್ಯವನ್ನೇ ನಾಶ ಮಾಡುವತ್ತ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ನಡೆಸದಂತೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರೂ ಸರ್ಕಾರಗಳು ಅದನ್ನು ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net