ಪತಿ-ಪತ್ನಿ ಸಮಸ್ಯೆ ಪರಿಹರಿಸುವುದಾಗಿ ಜ್ಯೋತಿಷಿ ವಂಚನೆ

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ
Published on

ಪ್ರಮುಖ ಮುಖ್ಯಾಂಶಗಳು

  • ಪತಿ ಸಮಸ್ಯೆ ಪರಿಹಾರಕ್ಕೆ ವಶೀಕರಣ ಜ್ಯೋತಿಷಿ ಮೊರೆ ಹೋಗಿದ್ದ ಮಹಿಳೆ
  • ದಂಪತಿಯ ಫೋಟೊ, ಚಿನ್ನಾಭರಣ ಮಡಿಕೆಯಲ್ಲಿರಿಸಿದ್ದ ಜ್ಯೋತಿಷಿ
ಶಿವಮೊಗ್ಗ: ವಶೀಕರಣ(fascination)ದ ಮೂಲಕ ಪತಿ-ಪತ್ನಿ ಸಮಸ್ಯೆ ಪರಿಹಾರ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ.
ನಗರದ ಮಹಿಳೆಯೊಬ್ಬರು ತಮ್ಮ ಪತಿ ಸಮಸ್ಯೆ ಪರಿಹಾರಕ್ಕೆ ವಶೀಕರಣ ಜ್ಯೋತಿಷಿ(Astrologer) ಮೊರೆ ಹೋಗಿದ್ದರು. ದುರ್ಗಿಗುಡಿಯಲ್ಲಿ ಕಚೇರಿ ಮಾಡಿಕೊಂಡಿದ್ದ ಈತ ಸಮಸ್ಯೆ ಪರಿಹಾರಕ್ಕೆ 61 ಗ್ರಾಂ ಚಿನ್ನಾಭರಣ ತರುವಂತೆ ತಿಳಿಸಿದ್ದ. ಅದರಂತೆ ಮಹಿಳೆ ತನ್ನ ಬಳಿ ಇದ್ದ 51 ಗ್ರಾಂ ಚಿನ್ನಾಭರಣ, ಆಕೆಯ ಸ್ನೇಹಿತೆ ಬಳಿಯಿಂದ 10 ಗ್ರಾಂ ಚಿನ್ನಾಭರಣ ಹೊಂದಿಸಿ ತಂದುಕೊಟ್ಟಿದ್ದರು.
ದಂಪತಿಯ ಫೋಟೊ, ಚಿನ್ನಾಭರಣವನ್ನು ಒಂದು ಮಡಿಕೆಯಲ್ಲಿ ಇರಿಸಿ, ಮಂತ್ರ ಪಠಿಸುವಂತೆ ಮಾಡಿ ಅದನ್ನು ಮುಚ್ಚಿ, ಕೆಂಪು ದಾರದಲ್ಲಿ ಕಟ್ಟಿದ ವಶೀಕರಣ ಜ್ಯೋತಿಷಿ ಅದನ್ನು ಮಹಿಳೆ ಕೈಗೆ ಕೊಟ್ಟಿದ್ದ. ಮಡಿಕೆಯನ್ನು ರಹಸ್ಯವಾಗಿ ಇಟ್ಟು ಐದು ದಿನ ಪೂಜೆ ಮಾಡಬೇಕು ಎಂದು ತಿಳಿಸಿದ್ದ. ಎರಡು ದಿನ ಪೂಜೆ ಬಳಿಕ ಅನುಮಾನಗೊಂಡು ಮಡಿಕೆ ತೆಗೆದ ಮಹಿಳೆಗೆ ಅದರೊಳಗೆ ಮಣ್ಣಿನ ಚೂರುಗಳು ಕಂಡಿವೆ. ಕೂಡಲೇ ಜ್ಯೋತಿಷ್ಯಾಲಯದ ಬಳಿ ಹೋದಾಗ ಕಚೇರಿಗೆ ಬೀಗ ಹಾಕಲಾಗಿತ್ತು.
ಜ್ಯೋತಿಷ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ವಿಚಾರಿಸಿದಾಗ ಜ್ಯೋತಿಷಿ ಲಕ್ನೋಗೆ ಹೋಗಿ ಬರುವುದಾಗಿ ಮೆಸೇಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ವಶೀಕರಣ, ಉದ್ಯೋಗ, ಪ್ರೇಮ ವಿಚಾರ, ಕೌಟುಂಬಿಕ ಕಲಹ ಪರಿಹಾರ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net