ಹುಂಚದಲ್ಲಿ ಆಶಾ ಕಾರ್ಯಕರ್ತೆಯರ ಬೆಳಗಾವಿ ಚಲೋ ಹೋರಾಟದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸುಬ್ಬರಾಜು ಉದ್ಘಾಟಿಸಿದರು. ರಾಜೇಶ್ವರಿ, ಪೂರ್ಣಿಮಾ, ಸುಮಾ, ತಿಪ್ಪೇಸ್ವಾಮಿ, ಚಂದ್ರಕಲಾ ಇತರರಿದ್ದರು.
ರಿಪ್ಪನ್‌ಪೇಟೆ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವ ಧನ ಹೆಚ್ಚಳ ಮಾಡುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ವರ್ಷ ಕಳೆದರೂ ಈಡೇರಿಸದೆ ವಿಳಂಬ ಮಾಡಿರುವುದನ್ನು ಖಂಡಿಸಿ ಡಿ.10ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ತಿಳಿಸಿದರು.
ಹುಂಚ ಪದ್ಮಾಂಬ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹೊಸನಗರ ತಾಲೂಕು ಆಶಾ ಕಾರ್ಯಕರ್ತೆಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 18 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತುರ್ತು ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಹಗಲೂ ರಾತ್ರಿ ಕರ್ತವ್ಯ ನಿರ್ವಹಿಸುತ್ತ ಅತಂತ್ರವಾಗಿ ಬದುಕುತ್ತಿರುವುದು ಸರ್ಕಾರ ಗಮನಿಸದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಚಟುವಟಿಕೆ ಆಧಾರಿತ ಪ್ರೋತ್ಸಾಹ ಧನ ನೀಡುವುದಾಗಿ ಸೇವೆಗೆ ನೇಮಿಸಿಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಆಶಾ ಕಾರ್ಯಕರ್ತರು ಹೋರಾಟದ ಮೂಲಕವೇ ಸೌಲಭ್ಯ ಪಡೆಯುವಂತಾಗಿದೆ. ಕೇಂದ್ರ ಸರ್ಕಾರದ ಪ್ರೋತ್ಸಾಹ ಧನವನ್ನು ಸೇರಿಸಿ 10 ಸಾವಿರ ರೂ. ಗೌರವಧನ ನೀಡುವುದಾಗಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಸೇರಿ ಹಲವು ಬೇಡಿಕೆಗಳು ಇಂದಿಗೂ ಸಾಕಾರವಾಗಿಲ್ಲ. ಹಾಗಾಗಿ ರಾಜ್ಯ ಸಮಿತಿಯ ಕರೆಯ ಮೇರೆಗೆ ಹೊರಟ ಹಮ್ಮಿಕೊಂಡಿದ್ದು, ಎಲ್ಲ ಕಾರ್ಯಕರ್ತೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೆಲವು ನರ್ಸ್‌ಗಳು ಕಾರ್ಯಕರ್ತೆಯರ ರಜೆ ತೆಗೆದುಕೊಳ್ಳುವ ಇನ್ನಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವೈದ್ಯರಿಗೆ ವಿನಾಕಾರಣ ದೂರುನೀಡಿ ತೊಂದರೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ದೂರದ ಮನೆಗಳಿಗೆ ಕರ್ತವ್ಯಕ್ಕೆ ನಿಯೋಜಿಸಿ, ವ್ಯಾಪ್ತಿಯ ಮಿತಿಯನ್ನು ಮೀರಿ ದುಡಿಸಿಕೊಳ್ಳುತ್ತಾರೆ. ಪ್ರಶ್ನಿಸಿದರೆ ಕೆಲಸ ಬಿಟ್ಟು ಹೋಗಿ ಎಂದು ಬೆದರಿಕೆ ಹಾಕುತ್ತಾರೆ. ನಾಲ್ಕೈದು ತಿಂಗಳಾದರೂ ಗೌರವಧನ ನೀಡುತ್ತಿಲ್ಲ. ಇಂತಹ ಹಲವು ಸಮಸ್ಯೆಗಳ ಜತೆಗೆ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಾರ್ಯಕರ್ತರು ಸಂಘದ ಮೇಲಧಿಕಾರಿಗಳೊಂದಿಗೆ ಚರ್ಚಿಸಿದರು.
ತಾಲೂಕು ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ಸುಮಾ, ಜಿಲ್ಲಾ ಉಸ್ತುವಾರಿ ಸುಬ್ಬರಾಜು, ಕಾರ್ಯದರ್ಶಿ ಚಂದ್ರಕಲಾ, ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ, ಸುಧಾ, ಜಯಶ್ರೀ ಇತರರಿದ್ದರು.