ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಒಪ್ಪಿಗೆ I drinking water scheme

ಚನ್ನಬಸಪ್ಪ, ಶಿವಮೊಗ್ಗ ಕ್ಷೇತ್ರದ ಶಾಸಕ
ಚನ್ನಬಸಪ್ಪ, ಶಿವಮೊಗ್ಗ ಕ್ಷೇತ್ರದ ಶಾಸಕ
Published on

ಪ್ರಮುಖ ಮುಖ್ಯಾಂಶಗಳು

  • ಸಕ್ರೆಬೈಲು ಸರ್ವೇ ನಂ.5ರಲ್ಲಿ ಯೋಜನೆ
  • ಕಂದಾಯ ಇಲಾಖೆಯ 24 ಎಕರೆ ಗುರುತು
  • ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ
ಶಿವಮೊಗ್ಗ:

ನಗರದಲ್ಲಿ ಕುಡಿಯುವ (drinking) ನೀರಿನ ಎರಡನೇ ಹಂತದ ಕಾಮಗಾರಿಗೆ (works) ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕಾಗಿ ಗಾಜನೂರು (gajanuru) ಸಮೀಪದ ಸಕ್ರೆಬೈಲು ಸರ್ವೇ ನಂ.5ರಲ್ಲಿ 24 ಎಕರೆ ಜಾಗ ಗುರುತಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದ ದೃಷ್ಟಿಯಿಂದ ಎರಡನೇ ಹಂತದ ಕುಡಿಯುವ ನೀರು ಯೋಜನೆಗೆ ಅನುಮೋದನೆ ನೀಡಲು ನಗರಾಭಿವೃದ್ಧಿ ಸಚಿವ ಬಿ.ಸುರೇಶ್ ಅವರಿಗೆ ಮನವಿ ಮಾಡಲಾಗಿತ್ತು. ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಯೋಜನೆಗೆ ಸ್ಪಷ್ಟ ರೂಪ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವರು ತಿಳಿಸಿದ್ದಾರೆ. ಮತ್ತೊಮ್ಮೆ ಅವರನ್ನು ಭೇಟಿಯಾಗಿ ಯೋಜನೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.
ಸಕ್ರೆಬೈಲು ಸರ್ವೇ ನಂ.5ರಲ್ಲಿ ಕಂದಾಯ ಇಲಾಖೆಯ ಜಾಗವಿದೆ. ಅಲ್ಲಿ ಅರಣ್ಯ ಇಲಾಖೆಯವರು ಗಿಡ ನೆಟ್ಟಿದ್ದಾರೆ. ಆ ಜಾಗದಲ್ಲಿ ಕುಡಿಯುವ ನೀರು ಯೋಜನೆಗೆ ಅಗತ್ಯವಿರುವ 24 ಎಕರೆ ಜಾಗವನ್ನು ಪಡೆಯಲಾಗುವುದು. ಇದಕ್ಕೆ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರದ ಅಗತ್ಯವಿಲ್ಲ. ಜಿಲ್ಲಾಧಿಕಾರಿ ಕೂಡ ಸ್ಥಳ ಸಮೀಕ್ಷೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ಮಂಜುನಾಥ ನವುಲೆ, ಪ್ರಮುಖರಾದ ಶ್ರೀನಾಗ್, ಶಿವಕುಮಾರ್, ಯಶೋದಾ, ಲತಾ ಶ್ರೀನಿವಾಸ್, ಪ್ರಕಾಶ್, ಸೋಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್‌ನಿಂದ ಭ್ರಷ್ಟರ ರಕ್ಷಣೆ

ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡ ದಿನ ನಾನು ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ಪ್ರಕರಣದ ಆರೋಪಿ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಇಂತಹ ಸರ್ಕಾರದಿಂದ ಭ್ರಷ್ಟಾಚಾರಮುಕ್ತ ಆಡಳಿತ ನಿರೀಕ್ಷಿಸುವುದು ಹೇಗೆ ಎಂದು ಎಸ್.ಎನ್.ಚನ್ನಬಸಪ್ಪ ಪ್ರಶ್ನಿಸಿದರು. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ನ ನಿಲುವೇನು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇಡೀ ಪಕ್ಷ ನಾಗೇಂದ್ರ ಅವರ ರಕ್ಷಣೆಗೆ ನಿಂತಿದೆ. ಕೆಪಿಎಸ್‌ಸಿ ಹಗರಣದ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಬಿಜೆಪಿ ಸದಸ್ಯರು ಬಯಸಿದ್ದೆವು. ಆದರೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರ ಎದುರು ಭ್ರಷ್ಟಾಚಾರ ವಿರುದ್ಧದ ಚರ್ಚೆ ಮಾಡುವುದಾದರೂ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿವೇಶನ ಆಪೋಶನ

ಪೂರ್ವನಿಗದಿಯಂತೆ ನಡೆಯಬೇಕಿದ್ದ ಅಧಿವೇಶನ ಮುಂಚಿತವಾಗಿಯೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಬಿ.ನಾಗೇಂದ್ರ ರಾಜೀನಾಮೆ ವಿಷಯ ಇಡೀ ಅಧಿವೇಶನವನ್ನೇ ಆಪೋಶನ ತೆಗೆದುಕೊಂಡಿತು. ಅಧಿವೇಶನದಲ್ಲಿ ಚರ್ಚೆ ನಡೆಯದೆ ಅನೇಕ ಮಸೂದೆಗಳನ್ನು ಸರ್ಕಾರ ಅಂಗೀಕರಿಸಿತು. ಇಡೀ ವ್ಯವಸ್ಥೆಯ ಬಗ್ಗೆ ಬೇಸರ ಮೂಡಿದೆ ಎಂದು ಎಸ್.ಎನ್.ಚನ್ನಬಸಪ್ಪ ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಪ್ರತಿಪಕ್ಷ ಸದಸ್ಯರು ಕೇಳಿದ ಒಟ್ಟು ಪ್ರಶ್ನೆಗಳ ಪೈಕಿ ಶೇ.50ಕ್ಕೆ ಮಾತ್ರ ಈ ಸರ್ಕಾರದಿಂದ ಉತ್ತರ ಬಂದಿದೆ. ಗಂಭೀರ ಪ್ರಶ್ನೆಗಳಿಗೂ ಸರ್ಕಾರ ಸೂಕ್ತ ಉತ್ತರ ನೀಡುತ್ತಿಲ್ಲ. ಇದು ಆಡಳಿತ ವ್ಯವಸ್ಥೆಗೆ ಕೈಗನ್ನಡಿ. ಸಮೀಕ್ಷೆ ನೆಪದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಈಗ ಒಂದು ತಿಂಗಳ ಮಾಸಾಶನ ಮಾತ್ರ ನೀಡಿದೆ. ಉಳಿದ ಐದು ತಿಂಗಳ ಮಾಸಾಶನವನ್ನೂ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net