ಕುವೆಂಪು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿ ನೀತಿ I anti student policy

ಕುವೆಂಪು ವಿವಿ ಆಡಳಿತ ವ್ಯವಸ್ಥೆ ಲೋಪ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾದ ಪ್ರಶಾಂತ್ ಕುಕ್ಕೆ, ಅರುಣ್ ಕುಗ್ವೆ, ಪ್ರಜ್ವಲ್, ಅನಿಲ್ ಲಕ್ಕಿನಕೊಪ್ಪ, ಯುವರಾಜ್, ವಿವೇಕ್ ಹೆಬ್ಬಾರ್ ಮತ್ತಿತರರು ಮನವಿ ಸಲ್ಲಿಸಿದರು.
ಕುವೆಂಪು ವಿವಿ ಆಡಳಿತ ವ್ಯವಸ್ಥೆ ಲೋಪ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾದ ಪ್ರಶಾಂತ್ ಕುಕ್ಕೆ, ಅರುಣ್ ಕುಗ್ವೆ, ಪ್ರಜ್ವಲ್, ಅನಿಲ್ ಲಕ್ಕಿನಕೊಪ್ಪ, ಯುವರಾಜ್, ವಿವೇಕ್ ಹೆಬ್ಬಾರ್ ಮತ್ತಿತರರು ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ವೈಫಲ್ಯ
  • ಲೋಪದೋಷ ಸರಿಪಡಿಸುವಂತೆ ಬಿಜೆಪಿ ಯುವ ಮೋರ್ಚಾ ಆಗ್ರಹ
  • ಶುಲ್ಕ ಹೆಚ್ಚಳ ಆದೇಶ ಹಿಂಪಡೆಯಲು ಒತ್ತಾಯ
ಶಿವಮೊಗ್ಗ: ಕುವೆಂಪು (kuvempu) ವಿವಿಯಲ್ಲಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಆಡಳಿತ ವೈಫಲ್ಯದ ಜತೆ ವಿವಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದ ಬಿಜೆಪಿ (bjp) ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ವಿವಿ ಕುಲಸಚಿವ (registrar) ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.
ಶುಲ್ಕ ಹೆಚ್ಚಳ ಹಿಂಪಡೆಯಬೇಕು. ಅಂಕಪಟ್ಟಿ ವಿತರಣೆಯಲ್ಲಿನ ವಿಳಂಬ ಸರಿಪಡಿಸಬೇಕು. ಘಟಿಕೋತ್ಸವ ಶುಲ್ಕವನ್ನು ಕಡಿಮೆ ಮಾಡಬೇಕು. ಎಲ್‌ಎಂಎಸ್ ಸೇರಿ ವಿವಿಧ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್, ಗ್ರಂಥಾಲಯ ಹಾಗೂ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನೇಮಕಾತಿ, ಟೆಂಡರ್, ಖರೀದಿ ಹಾಗೂ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿರುವ ಎಲ್ಲ ನಿರ್ಧಾರಗಳನ್ನು ಹಿಂಪಡೆಯಬೇಕು. ಆಡಳಿತ ವೈಫಲ್ಯಕ್ಕೆ ಹೊಣೆ ಹೊತ್ತು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಮುಖರಾದ ರಾಮಣ್ಣ, ಅರುಣ್ ಕುಗ್ವೆ, ದರ್ಶನ್, ರಾಹುಲ್ ಬಿದರೆ, ಅನಿಲ್ ಲಕ್ಕಿನಕೊಪ್ಪ, ಪ್ರಜ್ವಲ್, ಕಿರಣ್ ಪಟೇಲ್, ಸಂಜಯ್, ಹರೀಶ್ ನಾಯ್ಕ, ಯುವರಾಜ್, ವಿವೇಕ್ ಹೆಬ್ಬಾರ್, ಚಂದ್ರಶೇಖರ್, ಅಭಿಷೇಕ್ ಇತರರಿದ್ದರು.

ಸ್ಪಂದಿಸಿದ ಕುಲಸಚಿವ

ಪದವಿ ಪಡೆದ ವಿದ್ಯಾರ್ಥಿಗಳಿಗೆ 2022ರಿಂದಲೂ ಅಂಕಪಟ್ಟಿ ದೊರೆತಿಲ್ಲ ಎಂಬ ದೂರುಗಳಿವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಪ್ರಸ್ತಾಪಿಸಿದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ವಿವಿಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಹಾಗೂ ನೇಮಕಾತಿ ಅವ್ಯವಹಾರಗಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ವಿವಿ ಆಡಳಿತದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗುವುದು ಎಂದು ಎನ್.ಹೇಮಂತ್ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net