ದೇಶದ ಭದ್ರತೆ ಕಾಪಾಡಲು ಎಲ್ಲರೂ ಕೈಜೋಡಿಸಿ | Laying of foundation
ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಭಾರತಿ ಶೆಟ್ಟಿ, ರಾಜು ತಲ್ಲೂರು, ರಾಜು, ಶಿವಕುಮಾರ್ ಇತರರಿದ್ದರು.
ಸೊರಬ: ಗಡಿಯಲ್ಲಿ ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ದೇಶದ ಭದ್ರತೆಗಾಗಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಚಂದ್ರಗುತ್ತಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣ, ಉದ್ಯೋಗ, ರೈಲ್ವೆ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ದೇಶದ ಆರ್ಥಿಕ ಶಕ್ತಿಯನ್ನು ಮೊದಲನೇ ಸ್ಥಾನಕ್ಕೆ ತರುವ ರೀತಿ ಶ್ರಮವಹಿಸಲಾಗುತ್ತಿದೆ. ಸೊರಬದಲ್ಲಿ ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ರಸ್ತೆಗಳು ಯಾವುದು ಎಂಬುದು ಗೊತ್ತಾಗದಷ್ಟು ಹದಗೆಟ್ಟಿವೆ. ಮುಂದಿನ ಎರಡು ವರ್ಷದೊಳಗೆ ಇಲ್ಲಿನ ಶಾಸಕರು ರಸ್ತೆ ಅಭಿವೃದ್ಧಿಪಡಿಸಲಿ. ಅಲ್ಲಿಯವರೆಗೂ ನಾವೆಲ್ಲರೂ ಕಾಯೋಣ ಎಂದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ತಾಲೂಕಿನ ವಿವಿಧಡೆ 112 ಕೋಟಿ ರೂ. ವೆಚ್ಚದಲ್ಲಿ 37 ಕಾಮಗಾರಿಗಳ ಸುಮಾರು 159 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ರಸ್ತೆ, ಸಮುದಾಯ ಭವನ ಸೇರಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.
ಎಂಎಲ್‌ಸಿ ಭಾರತಿ ಶೆಟ್ಟಿ, ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ ರಾಜು ತಲ್ಲೂರು, ಚಂದ್ರಗುತ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜು, ಕಾರ್ಯದರ್ಶಿ ಪ್ರಸನ್ನ ಶೇಟ್, ಪ್ರಮುಖರಾದ ರಾಜಶೇಖರ್, ಡಾ. ಜ್ಞಾನೇಶ್, ಗುರುಪ್ರಸನ್ನ ಗೌಡ, ಪಾಣಿ ರಾಜಪ್ಪ, ಹೊಳಿಯಮ್ಮ, ರಾಜು, ಲೋಕೇಶ್, ಕವಿತಾ ಸಂತೋಷ್ ಇತರರಿದ್ದರು.