ಕೃಷಿ ವಿವಿ ಪ್ರವೇಶದ್ವಾರಕ್ಕೆ ಬೀಗ | student protest continued
ಕೃಷಿ ಅಧಿಕಾರಿಗಳ ನೇಮಕಾತಿಗೆ ತಿದ್ದುಪಡಿಗೆ ಆಗ್ರಹಿಸಿ ಇರುವಕ್ಕಿ ಕೃಷಿ ವಿವಿ ವಿದ್ಯಾರ್ಥಿಗಳು ಪ್ರವೇಶದ್ವಾರದ ಗೇಟ್ ಬೀಗ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಮಳೆಯಲ್ಲೇ ಗೇಟ್‌ನ ಹೊರಗಡೆ ನಿಂತಿರುವುದು.
ಆನಂದಪುರ: ಕೃಷಿ ಅಧಿಕಾರಿಗಳ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹಿಸಿ ಮಂಗಳವಾರ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿವಿಯ ಪ್ರವೇಶ ದ್ವಾರ ಬಂದ್ ಮಾಡಿ ಮುಷ್ಕರ ನಡೆಸಿದರು.
ಕಾಲೇಜು ಬೆಳಗ್ಗೆ ಆರಂಭಕ್ಕೂ ಮುನ್ನವೇ ಪ್ರವೇಶ ದ್ವಾರ ಬಂದ್ ಮಾಡಿದ ಕಾರಣ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ದಿನಗೂಲಿ ನೌಕರರು ಗೇಟ್ ಹೊರಗಡೆಯೇ ನಿಂತುಕೊಳ್ಳಬೇಕಾಯಿತು. ಮಧ್ಯಾಹ್ನದವರೆಗೂ ಮುಷ್ಕರ ಮುಂದುವರಿಯಿತು.
ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಕೃಷಿ ಮತ್ತು ತೋಟಗಾರಿಕೆ ಪದವಿ ವ್ಯಾಸಂಗ ಮಾಡಿದವರನ್ನೇ ನೇಮಕ ಮಾಡಬೇಕು. ಈ ಬಗ್ಗೆ ಸಿ ಆ್ಯಂಡ್ ಆರ್ ನಿಯಮ ತಿದ್ದುಪಡಿ ಮಾಡಬೇಕು. ಇತರೆ ಪದವಿ ವ್ಯಾಸಂಗ ಮಾಡಿದವರಿಗೆ ಅವಕಾಶ ನೀಡಬಾರದು ಎಂದು ವಿದ್ಯಾರ್ಥಿ ಯೂನಿಯನ್ ಸಂಚಾಲಕ ರಾಘವೇಂದ್ರ ಒತ್ತಾಯಿಸಿದರು.
ಹುದ್ದೆಗಳ ಭರ್ತಿಗೆ ಸರ್ಕಾರ ಪರೀಕ್ಷೆ ನಡೆಸುತ್ತಿದ್ದು, ಪ್ರವೇಶ ಪತ್ರವನ್ನೂ ಸಹ ಕೊಡಲಾಗುತ್ತಿದೆ. ಸರ್ಕಾರದ ನಿರ್ಧಾರ ಖಂಡಿಸಿ ಆ.5ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಎಲ್ಲ ವಿದ್ಯಾರ್ಥಿಗಳು ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದರು.