ಶಿಕಾರಿಪುರದಲ್ಲಿ ರೈತರು ಭತ್ತದ ನಾಟಿಗೆ ಗದ್ದೆಗಳನ್ನು ಸಿದ್ಧಪಡಿಸುತ್ತಿರುವುದು.
Published on:
Copied
Follow Us
ಶಿಕಾರಿಪುರ: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಮೆಕ್ಕೆಜೋಳ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಭತ್ತದ ಸಸಿಮಡಿ ಸಿದ್ಧತೆಗಳು ಪೂರ್ಣಗೊಂಡಿವೆ. ತಾಳಗುಂದ ಹೋಬಳಿ ಸೇರಿ ವಿವಿಧೆಡೆ ಭತ್ತದ ನಾಟಿ ಆರಂಭಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 40 ಸಾವಿರ ಎಕರೆ ಮೆಕ್ಕೆಜೋಳ ಬೆಳೆ ವ್ಯಾಪ್ತಿ ಇದ್ದು, ಈವರೆಗೆ 36 ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಈ ಬಾರಿ ಮಳೆ ವ್ಯತ್ಯಯದಿಂದ ಮೆಕ್ಕೆಜೋಳ ಕಾಳು ಹಿಡಿಯದೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.
ಶಿಕಾರಿಪುರ ತಾಲೂಕಿನಲ್ಲಿ ವರ್ಷಪೂರ್ತಿ ಹಾಗೂ ಪ್ರಸ್ತುತ ಹಂಗಾಮಿಗೆ ಅಗತ್ಯ ಇರುವಷ್ಟು ರಸಗೊಬ್ಬರ ಲಭ್ಯವಿದೆ. ತಾಲೂಕಿನಲ್ಲಿ ಒಟ್ಟು 10,874 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. 2,952 ಮೆಟ್ರಿಕ್ ಟನ್ ಮಾರಾಟವಾಗಿದೆ. ಪ್ರಸ್ತುತ ರೈತರ ಬಳಕೆಗೆ 7,922 ಮೆಟ್ರಿಕ್ ಟನ್ ರಸಗೊಬ್ಬರ ಶೇಖರಣೆಯಲ್ಲಿದ್ದು, ಗೊಬ್ಬರದ ಕೊರತೆ ಇಲ್ಲ.
ಕಿರಣ್‌ಕುಮಾರ್ ಹರ್ತಿ
ಶಿಕಾರಿಪುರ ಸಹಾಯಕ ಕೃಷಿ ನಿರ್ದೇಶಕ
ಶಿಕಾರಿಪುರ ತಾಲೂಕಿನಲ್ಲಿ ಒಟ್ಟು 26,250 ಎಕರೆ ಭತ್ತ ಬೆಳೆಯುವ ಪ್ರದೇಶ ಇದ್ದು, ಪ್ರಸ್ತುತ ಜಮೀನುಗಳಲ್ಲಿ ನಾಟಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಆದರೂ ರೈತರು ಸಸಿಮಡಿ ಸಿದ್ಧಪಡಿಸಿಕೊಂಡಿದ್ದಾರೆ. ಮಳೆಯಾದ ಕಾರಣ ನಾಟಿ ಮಾಡಲು ಮುಂದಾಗಿದ್ದಾರೆ.
ಪ್ರತಿ ವರ್ಷ ತಾಲೂಕಿನಲ್ಲಿ ಸರಾಸರಿ 2,400 ಕ್ವಿಂಟಾಲ್ ಮೆಕ್ಕೆಜೋಳ ಹಾಗೂ 1,750 ಕ್ವಿಂಟಾಲ್ ಭತ್ತದ ಬೀಜಗಳು ಖರ್ಚಾಗುತ್ತಿದ್ದವು. ಈ ವರ್ಷ ಈವರೆಗೆ ಮೆಕ್ಕೆಜೋಳ ಬೀಜ 2,160 ಕ್ವಿಂಟಾಲ್, ಭತ್ತದ ಬೀಜ 1,600 ಕ್ವಿಂಟಾಲ್ ವಿತರಣೆಯಾಗಿದೆ.
ಶಿಕಾರಿಪುರ ಹೋಬಳಿಯಲ್ಲಿ ಒಂದು ವಾರದಲ್ಲಿ 109.8 ಮಿ.ಮೀ, ಅಂಜನಾಪುರ ಹೋಬಳಿಯಲ್ಲಿ 114.3, ಹೊಸೂರು 64.9, ಉಡುಗಣಿ 90.8 ಹಾಗೂ ತಾಳಗುಂದದಲ್ಲಿ 80.8 ಮಿ.ಮೀ ಮಳೆಯಾಗಿದೆ. ಶಿಕಾರಿಪುರದಲ್ಲಿ ಆ.1ರಿಂದ 5ರವರೆಗೆ 85.6 ಮಿ.ಮೀ ಮಳೆಯಾಗಿದೆ. ಐದು ದಿನದಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾದರೂ ಜೂನ್‌ನಿಂದ ಈವರೆಗಿನ ಲೆಕ್ಕಾಚಾರದಲ್ಲಿ ಶೇ.26ರಷ್ಟು ಮಳೆ ಕೊರತೆಯಾಗಿದೆ.