ವರುಣನ ಕಣ್ಣಾಮುಚ್ಚಾಲೆಗೆ ಕೃಷಿ ಚಟುವಟಿಕೆ ಸ್ತಬ್ಧ

ತುಂಬಿ ಹರಿಯಬೇಕಾಗಿದ್ದ ಭದ್ರಾ ನದಿ ನೀರಿಲ್ಲದೆ ಸೊರಗಿರುವುದು.
ತುಂಬಿ ಹರಿಯಬೇಕಾಗಿದ್ದ ಭದ್ರಾ ನದಿ ನೀರಿಲ್ಲದೆ ಸೊರಗಿರುವುದು.
Published on
ಕಳಸ: ಸದಾ ಹಸಿರನ್ನು ಹೊದ್ದು ನಿಲ್ಲುವ ಕಳಸ ತಾಲೂಕಿನಲ್ಲಿ ಜೂನ್ ಬಂದರೆ ಸಾಕು ಮಳೆ ಆರ್ಭಟ ಆರಂಭವಾಗುತ್ತಿದೆ. ಆದರೆ, ಈ ಬಾರಿ ವಾತಾವರಣವೇ ಉಲ್ಟಾ ಹೊಡೆದಿದ್ದು, ಮುಂಗಾರು ಮಳೆ ಅಬ್ಬರದ ಧ್ವನಿ ಕೇಳಬೇಕಾದ ಜಾಗದಲ್ಲಿ ಈಗ ಬೇಸಿಗೆ ಬಿಸಿಲು ಆವರಿಸಿದೆ. ವರುಣನ ಕಣ್ಣಾಮುಚ್ಚಾಲೆಯಿಂದ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಳಸ ತಾಲೂಕಿನಲ್ಲಿ ಬಿದ್ದಿರುವ ಮಳೆ ಪ್ರಮಾಣದ ಅಂಕಿ ಅಂಶಗಳನ್ನು ಗಮನಿಸಿದರೆ ಮಳೆ ಅಭಾವ ಎಷ್ಟು ಭೀಕರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ ವರ್ಷ ಜೂನ್ 15ರ ವೇಳೆಗೆ ತಾಲೂಕಿನಲ್ಲಿ 135.2 ಮಿ.ಮೀ ಮಳೆಯಾಗಿತ್ತು. ಆದರೆ ಈ ಬಾರಿ ಕೇವಲ 101.8 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್15ರ ಅವಧಿಯಲ್ಲಿ ಬರೋಬ್ಬರಿ 1,088.4 ಮಿ.ಮೀ ಮಳೆಯಾಗಿ ಭೂಮಿಯನ್ನು ತಂಪಾಗಿಸಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ಕೇವಲ 355.6 ಮಿ.ಮೀ ಮಳೆಯಾಗಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚು ಮಳೆ ಕೊರತೆ ಎದುರಾಗಿದೆ. ಮೇನಲ್ಲಿ ಆಲಿಕಲ್ಲು ಸಹಿತ ಬಿದ್ದ ಅಲ್ಪ-ಸ್ವಲ್ಪ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತಾದರೂ ಜೂನ್ ಆರಂಭವಾಗುತ್ತಿದ್ದಂತೆ ಆ ಭರವಸೆ ಸಂಪೂರ್ಣ ಕ್ಷೀಣಿಸಿದೆ.
ಸಾಮಾನ್ಯವಾಗಿ ಮಲೆನಾಡಿನಲ್ಲಿ ಮುಂಗಾರಿನ ಆರಂಭದಲ್ಲಿ ಅಡಿಕೆಗೆ ಕೊಳೆ ರೋಗದ ವಿರುದ್ಧ ಬೋರ್ಡೋ ದ್ರಾವಣ (ಮೈಲುತುತ್ತ ಮತ್ತು ಸುಣ್ಣದ ಮಿಶ್ರಣ) ಹಾಗೂ ಕಾಫಿ/ಮೆಣಸಿಗೆ ಶಿಲೀಂಧ್ರ ನಾಶಕಗಳನ್ನು ಸಿಂಪಡಿಸಲಾಗುತ್ತದೆ. ಮಳೆ ಇಲ್ಲದ ಒಣ ಹವೆಯಲ್ಲಿ ಸಿಂಪಡಣೆ ಮಾಡುವುದರಿಂದ ಈ ಬಿಸಿಲು ಹೆಚ್ಚಾಗಿದ್ದಾಗ ಅಥವಾ ಒಣ ಹವೆ ಇದ್ದಾಗ ಬೋರ್ಡೋ ದ್ರವ ಅಥವಾ ಕೀಟನಾಶಕಗಳನ್ನು ಸಿಂಪಡಿಸಿದರೆ ಅವುಗಳ ತೀವ್ರತೆಗೆ ಎಲೆಗಳು, ಅಡಿಕೆ ಎಳೆ ಪಿಂಚ್‌ಗಳು ಮತ್ತು ಮೆಣಸಿನ ಹೂ ಗೊಂಚಲುಗಳು ಸುಟ್ಟುಹೋಗುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net