ಮುಖ್ಯ ರಸ್ತೆ ವಿಸ್ತರಣೆಗೆ ಕ್ರಮ | meeting with publics
ರಿಪ್ಪನ್‌ಪೇಟೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಸಾರ್ವಜನಿಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಪಿಡಬ್ಲುೃಡಿ ಎಇಇ ಸುನೀಲ್‌ಕುಮಾರ್ ಮಾತನಾಡಿದರು. ಗೌಡಪ್ಪ ಗೌಡರ್, ರಾಜು ರೆಡ್ಡಿ, ಶ್ರೀಕಾಂತ್ ಇದ್ದರು.
Published on:
Copied
Follow Us
ರಿಪ್ಪನ್‌ಪೇಟೆ: ಪಟ್ಟಣದ ಪ್ರಮುಖ ರಸ್ತೆ ವಿಸ್ತರಣೆಗಾಗಿ ಗುರುತು ಮಾಡಲಾಗಿದ್ದ ಕಟ್ಟಡಗಳ ತೆರವಿನಲ್ಲಿ ತಾರತಮ್ಯ ಮಾಡಲಾಗಿದೆ. ಆದ್ದರಿಂದ ವ್ಯವಸ್ಥಿತ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ದೂರಿದರು.
ಪಟ್ಟಣದ ರಸ್ತೆ ಅಭಿವೃದ್ಧಿ ಜತೆಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಗುರುವಾರ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಸಮಾನ ಮಾನದಂಡ ಅನುಸರಿಸಿದರೆ ಇನ್ನಷ್ಟು ಜಾಗ ಲಭ್ಯವಾಗಲಿದೆ. ವಾಹನ ನಿಲುಗಡೆ ಹಾಗೂ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ವಿನಾಯಕ ವೃತ್ತದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿದರೆ ಜನದಟ್ಟಣೆಯನ್ನು ನಿಯಂತ್ರಿಸಬಹುದು. ರೋಗಿಗಳಿಗೆ, ವರ್ತಕರಿಗೆ, ಗ್ರಾಮೀಣ ಜನರಿಗೆ ಅನುಕೂಲವಾಗದಂತೆ ಪೊಲೀಸರು ನಿಯಮ ರೂಪಿಸಿ ಅನುಷ್ಠಾನ ಮಾಡಬೇಕು. ಪಟ್ಟಣದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಹಕರಿಸುವುದಾಗಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಸುನಿಲ್‌ಕುಮಾರ್ ಮಾತನಾಡಿ, ಇಲಾಖೆಯು ಯಾರ ಪರವೂ ಅಲ್ಲ, ವಿರುದ್ಧವೂ ಇಲ್ಲ. ನೀಲಿನಕ್ಷೆಯಂತೆ ಕಾಮಗಾರಿ ಅನುಷ್ಠಾನ ನಮ್ಮ ಉದ್ದೇಶ. ಮಳೆ ಆರಂಭದ ಮುನ್ಸೂಚನೆ ಇದ್ದುದರಿಂದ ರಸ್ತೆ ಡಾಂಬರೀಕರಣಕ್ಕೆ ಆದ್ಯತೆ ನೀಡಲಾಯಿತು. ಚರಂಡಿ ಸ್ಲ್ಯಾಬ್ ನಿರ್ಮಾಣ ಹಾಗೂ ವಿಸ್ತರಣೆ ಕಾರ್ಯ ಆರಂಭಿಸಲಾಗುವುದು. ಗುರುತು ಮಾಡಿರುವ ಜಾಗವನ್ನು ಒಂದಷ್ಟು ಜನ ತೆರವುಗೊಳಿಸಿದ್ದಾರೆ. ಉಳಿದವರು ಕೂಡಲೇ ಕಟ್ಟಡ, ಕಾಂಪೌಂಡ್ ತೆರವುಗೊಳಿಸಿ. ಇಲ್ಲವಾದಲ್ಲಿ ಹೆದ್ದಾರಿ ಸರ್ವೇ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ. ಆಗ ನಿಮ್ಮ ಪೂರ್ಣ ಕಟ್ಟಡವೇ ಉಳಿಯುವುದಿಲ್ಲ. ನಿಯಮದಂತೆ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ನಿಯಮಗಳನ್ನು ರೂಪಿಸಲಾಗಿದೆ. ನಿಯಮ ಉಲ್ಲಂಘಿಸದಂತೆ ಜಾಗೃತಿ ಮೂಡಿಸುವುದು ಪೊಲೀಸರ ಕರ್ತವ್ಯ. ಕಾನೂನುಗಳನ್ನು ಪಾಲಿಸುವುದು ಜನರ ಜವಾಬ್ದಾರಿ ಎಂದು ಹೊಸನಗರ ಸಿಪಿಐ ಗೌಡಪ್ಪ ಗೌಡರ್ ಹೇಳಿದರು. ವೃತ್ತದಲ್ಲಿ ಜನಸಂಚಾರಕ್ಕೆ ಅನುವು ಮಾಡಿ, ಪ್ರಮುಖ 4 ರಸ್ತೆಗಳಲ್ಲಿ 100 ಮೀ. ದೂರದಲ್ಲಿ ದ್ವಿಚಕ್ರ ವಾಹನ ಹಾಗೂ ನಂತರದಲ್ಲಿ ಕಾರು ಮತ್ತಿತರ ವಾಹನಗಳನ್ನು, ಸಂಚಾರಿ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೊಂದರೆ ಆಗದಂತೆ ನಿಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಆಯಾ ಸ್ಥಳಗಳಿಗೆ ಬಣ್ಣ ಬಳಿದು ಗುರುತು ಹಾಕಲಾಗುವುದು ಎಂದರು.