ಶಿರಾಳಕೊಪ್ಪ: ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆಗಳ ಅಧ್ಯಯನಕ್ಕಾಗಿ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರನ್ನು ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ. ಅಲ್ಲಿನ ಯೋಜನೆಗಳನ್ನು ಪಟ್ಟಣದ ಅಭಿವೃದ್ಧಿಗೆ ಅಳವಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು.
ಪುರಸಭೆ, ಬನಶಂಕರಿ ಮಹಿಳಾ ಸ್ವಸಹಾಯ ಸಂಘ, ಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಪಟ್ಟಣದ ಹೊಂಡದ ಪಾರ್ಕ್ ಅಭಿವೃದ್ಧಿಯ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನವನ್ನು ಆಕರ್ಷಕವಾಗಿ ರೂಪಿಸಲಾಗುವುದು. ರಸ್ತೆ ವಿಭಜಕಗಳಲ್ಲಿ ನೆಟ್ಟಿರುವ ಗಿಡಗಳ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪರಿಸರ ಅಭಿಯಂತ ರಾಘವೇಂದ್ರ ಮಾತನಾಡಿ, ರಸ್ತೆ ವಿಭಜಕಗಳಲ್ಲಿ ಪಾಮ್ ಮರಗಳು ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಇದಕ್ಕಾಗಿ ಪುರಸಭೆ ಸಂಗ್ರಹಿಸಿದ ಹಸಿ ಕಸದಿಂದ ತಯಾರಿಸಿದ ಸಾವಯವ ಗೊಬ್ಬರ ಬಳಸಲಾಗಿದೆ ಎಂದರು.
ಸಮುದಾಯ ಸಂಘಟನಾಧಿಕಾರಿ ಬಾಲಾಜಿ ರಾವ್, ವ್ಯವಸ್ಥಾಪಕ ನಿರಂಜನ್, ಸ್ವಚ್ಛತಾ ರಾಯಭಾರಿ ಜಿ.ಎನ್.ಅರುಣ್‌ಕುಮಾರ್, ಕಿರಿಯ ಅಭಿಯಂತ ಶೇಖರ್ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ್, ಮಹಿಳಾ ಸಂಘದ ಅಧ್ಯಕ್ಷೆ ಎಸ್. ರೂಪಾ ಸಂಜಯ್, ಬನಶಂಕರಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಪುರಸಭೆ ಸಿಬ್ಬಂದಿ ಇದ್ದರು.